ಕರ್ನಾಟಕ

karnataka

ETV Bharat / city

ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ನಮ್ಮ ಹೋರಾಟ ನಿರಂತರ : ಡಿಕೆಶಿ - KPCC president DK Shivakumar slams against central Govt

ಬೆಲೆ ಹೆಚ್ಚಳದ ಅರಿವು ಕೇಂದ್ರ ಸರ್ಕಾರಕ್ಕೆ ಆಗುವವರೆಗೂ ನಾವು ಜನರ ಜತೆ ನಿಂತು ಹೋರಾಟ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

KPCC President DK Shivakumar press meet in Bengaluru
ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಜಂಟಿ ಸುದ್ದಿಗೋಷ್ಠಿ

By

Published : Apr 3, 2022, 2:43 PM IST

ಬೆಂಗಳೂರು:ದೇಶದ 120 ಕೋಟಿ ರೈತರಿಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ದೂರಿದರು. ಕೆಪಿಸಿಸಿ ಕಚೇರಿಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜತೆ ಜಂಟಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ, ಕೇಂದ್ರ ಸರ್ಕಾರ ರೈತರ ಮೇಲೆ 3,600 ಕೋಟಿ ಹೆಚ್ಚುವರಿ ಹೊರೆಯನ್ನು ಹೊರಿಸಿದೆ. ಜಿಎಸ್​ಟಿ ದರ ಹೆಚ್ಚಳ ಮತ್ತು ರಾಸಾಯನಿಕಗಳ ಬೆಲೆ ಹೆಚ್ಚಳದ ಮೂಲಕ ಈ ಹೊರೆಯನ್ನು ಹೊರಿಸಿದೆ ಎಂದು ವಾಗ್ದಾಳಿ ನಡೆಸಿದರು.

ದೇಶಾದ್ಯಂತ ಪೆಟ್ರೋಲ್​, ಡೀಸೆಲ್ ಬೆಲೆಯನ್ನು ಹೆಚ್ಚಿಸಲಾಗಿದೆ. ಇದರಿಂದಾಗಿ ರೈತರ ಕೃಷಿ ಚಟುವಟಿಕೆ ವೆಚ್ಚ ಹೆಚ್ಚಾಗಿದೆ. ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಕಡಿಮೆ ಇದ್ದರೂ ಸಹ ಕೇಂದ್ರ ಸರ್ಕಾರ ಇಂಧನ ಬೆಲೆಯನ್ನು ಹೆಚ್ಚಿಸುತ್ತಲೇ ಸಾಗಿದೆ. ಅಕ್ಕಪಕ್ಕದ ರಾಷ್ಟ್ರಗಳಲ್ಲಿ ಇಂಧನ ಬೆಲೆ ನಿಯಂತ್ರಣ ಆಗುತ್ತಿದೆ. ಆದರೆ ಭಾರತದಲ್ಲಿ ಆ ಪ್ರಯತ್ನ ನಡೆದಿಲ್ಲ. ಅಡುಗೆ ಅನಿಲ ಬೆಲೆ ಹೆಚ್ಚಳವಾಗಿದೆ. ಬೆಲೆ ಹೆಚ್ಚಳದ ಅರಿವು ಕೇಂದ್ರ ಸರ್ಕಾರಕ್ಕೆ ಆಗುವವರೆಗೂ ನಾವು ಜನರ ಜತೆ ನಿಂತು ಹೋರಾಟ ಮಾಡುತ್ತೇವೆ ಎಂದು ಡಿ ಕೆ ಶಿವಕುಮಾರ್​ ಹೇಳಿದರು.

ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಜಂಟಿ ಮಾಧ್ಯಮಗೋಷ್ಟಿ

ಹೋರಾಟ ಮುಂದುವರಿಯಲಿದೆ: ಜನಜಾಗೃತಿ ಮೂಡಿಸಿ ಈ ಸರ್ಕಾರವನ್ನು ಕಿತ್ತೊಗೆಯುವವರೆಗೂ ನಾವು ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ. ಅವೈಜ್ಞಾನಿಕವಾಗಿ ಕೇಂದ್ರ ಸರ್ಕಾರ ಬೆಲೆ ಹೆಚ್ಚಳ ಮಾಡಿದ್ದು, ಇದು ಇಳಿಯಲೇಬೇಕಿದೆ. ದಿನನಿತ್ಯದ ವಸ್ತುಗಳು ಹಾಗೂ ನಿರ್ಮಾಣ ಸಾಮಗ್ರಿಗಳ ಬೆಲೆ ಸಹ ಹೆಚ್ಚಿಸಲಾಗಿದೆ. ಕೇಂದ್ರ ಸರ್ಕಾರಕ್ಕೆ ಯಾವುದೇ ರೀತಿಯಲ್ಲಿಯೂ ಜನಪರ ಕಾಳಜಿ ಇಲ್ಲ. ನಿರಂತರವಾಗಿ ಬೆಲೆ ಹೆಚ್ಚಳ ಮಾಡುತ್ತಲೇ ಸಾಗಿದೆ. ಜನರ ಸಮಸ್ಯೆ ಬಗ್ಗೆ ಕಾಳಜಿ ಇಲ್ಲದ ಇಂತಹ ಸರ್ಕಾರ ಅಸ್ತಿತ್ವದಲ್ಲಿದ್ದು ಏನು ಪ್ರಯೋಜನ ಎಂದು ಪ್ರಶ್ನಿಸಿದರು. ಅತ್ಯಂತ ಪ್ರಮುಖವಾಗಿ ತೈಲಬೆಲೆ ಹಾಗೂ ರಾಸಾಯನಿಕ ಗೊಬ್ಬರದ ಬೆಲೆ ಇಳಿಕೆ ಆಗಲೇಬೇಕಿದೆ. ಇದನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ಹಾಗೂ ಹೋರಾಟದ ರೂಪುರೇಷೆಯನ್ನು ನಡೆಸುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದ್ರು.

ರೈತರ ರಕ್ತ ಕುಡಿಯಲು ಆರಂಭಿಸಿದ್ದಾರೆ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಮಾ.1 ರಂದು ಕೇಂದ್ರ ಸರ್ಕಾರ ಡಿಎಪಿ ಬೆಲೆಯನ್ನು ಯದ್ವಾತದ್ವ ಹೆಚ್ಚಳ ಮಾಡಿದೆ. ಎಲ್ಲರನ್ನೂ ಸಮಾನವಾಗಿ ಕೊಂಡೊಯ್ಯುವ ಕಾರ್ಯವನ್ನು ಮಾಡಬೇಕು. ಆದರೆ ಕೇಂದ್ರ ಸರ್ಕಾರದಿಂದ ಈ ಕಾರ್ಯ ಆಗುತ್ತಿಲ್ಲ. ಕೇಂದ್ರ ಸರ್ಕಾರ ರೈತರಿಂದ 3,600 ಕೋಟಿ ರೂಪಾಯಿ ಕಿತ್ತುಕೊಳ್ಳುತ್ತಿದೆ. ಇದು ರೈತರ ಸುಲಿಗೆಯಾಗಿದೆ. ರೈತರ ಆದಾಯವನ್ನು ದುಪ್ಪಟ್ಟು ಮಾಡುತ್ತೇನೆ ಎಂದು ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಅವರು ಇಂದು ರೈತರ ರಕ್ತ ಕುಡಿಯಲು ಆರಂಭಿಸಿದ್ದಾರೆ. ರೈತರನ್ನು ವಂಚಿಸಿ ಶೋಷಣೆ ಮಾಡುತ್ತಿದ್ದಾರೆ ಎನ್ನುವುದು ಈ ಬೆಲೆ ಹೆಚ್ಚಳದಿಂದ ಸ್ಪಷ್ಟವಾಗುತ್ತದೆ ಎಂದು ಕಿಡಿಕಾರಿದರು.

ಬೆಳೆಗಳಿಗೆ ರೈತರು ಬಳಸುವ ಔಷಧಿಗಳ ಮೇಲಿನ ಜಿಎಸ್​ಟಿ ಬೆಲೆ ಹೆಚ್ಚಿಸಿದ್ದಾರೆ. ರಸಗೊಬ್ಬರ ಹಾಗೂ ಟ್ರ್ಯಾಕ್ಟರ್ ಗಳ ಮೇಲಿನ ತೆರಿಗೆ ಹೆಚ್ಚಿಸಲಾಗಿದೆ. ರೈತರು ಬೆಳೆದ ರಾಗಿಯನ್ನು ಸಹ ಸರ್ಕಾರ ಸಮರ್ಪಕವಾಗಿ ಖರೀದಿಸುತ್ತಿಲ್ಲ. ಇದರಿಂದ 1500 ರೂ. ರೈತರಿಗೆ ನಷ್ಟವಾಗುತ್ತದೆ. ಇದೇ ರೀತಿ ಮೆಕ್ಕೆಜೋಳ ಮತ್ತು ಭತ್ತ ಖರೀದಿಯಲ್ಲಿಯೂ ರೈತರಿಗೆ ಅನ್ಯಾಯವಾಗಿದೆ. ರೈತರ ಬೆಳೆಯನ್ನು ಹೆಚ್ಚಿಸಿ ಬೆಲೆ ದ್ವಿಗುಣ ಗೊಳಿಸುವುದಾಗಿ ಹೇಳಿ ಈಗ ಈ ರೀತಿ ಸುಲಿಗೆ ಮಾಡುತ್ತಿದ್ದಾರೆ. ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಕಳೆದ ಎಂಟು ವರ್ಷಗಳಲ್ಲಿ ಸರಾಸರಿ 60 ಡಾಲರ್ ನಷ್ಟಿದೆ. ಇಂದಿನ ಬೆಲೆ 108.25 ಡಾಲರ್ ಇದೆ. ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಸರಾಸರಿ 60 ಡಾಲರ್ ಗಿಂತ ಹೆಚ್ಚಳ ಆಗಿಯೇ ಇಲ್ಲ ಎಂದು ಹೇಳಿದರು.

ಯಾಕೆ ಜನರಿಗೆ ಸುಳ್ಳು ಹೇಳುತ್ತೀರಾ?: ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ಕಚ್ಚಾತೈಲ ಬೆಲೆ ಎಷ್ಟಿತ್ತು? ಈಗ ಎಷ್ಟಿದೆ ಅಂತಾ ಗಮನಿಸಬೇಕು. ನವೆಂಬರ್ ನಿಂದ ಮಾರ್ಚ್ ವೆಗೆಗೂ ಪಂಚರಾಜ್ಯ ಚುನಾವಣೆ ಪಲಿತಾಂಶ ಬರುವವರೆಗೂ ಯಾವುದೇ ಬೆಲೆ ಹೆಚ್ಚಳ ಮಾಡಲಿಲ್ಲ. ಆದರೆ ಚುನಾವಣೆ ಫಲಿತಾಂಶ ಬಂದ ಬಳಿಕ 7.20 ರೂ. ಹೆಚ್ಚಾಗಿದೆ. ವಾಣಿಜ್ಯ ಇಂಧನ ಬೆಲೆ 250 ರೂ. ಹೆಚ್ಚಳ ಆಗಿದೆ. ಕೇಳಿದರೆ ಕೇಂದ್ರ ಸಚಿವರು ಯಾವುದು ನಮ್ಮ ಕೈಲಿ ಇಲ್ಲ ಎನ್ನುತ್ತಾರೆ. ಬೆಲೆ ಏರಿಕೆ ಆಗುತ್ತಲೇ ಇದೆ. ಜತೆಗೆ ರೈತರ ಬೆಳೆಯ ಬೆಲೆ ಕಡಿಮೆ ಆಗುತ್ತಲೇ ಇದೆ. ಯಾಕೆ ಜನರಿಗೆ ಸುಳ್ಳು ಹೇಳುತ್ತೀರಾ ಮೋದಿಯವರೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಇಂಧನ ಬೆಲೆ ಹೆಚ್ಚಳದಿಂದ ಕೇಂದ್ರ ಸರ್ಕಾರಕ್ಕೆ 26 ಲಕ್ಷ ಕೋಟಿ ಆದಾಯ ಹರಿದು ಬಂದಿದೆ. ಆದರೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಳಿದರೆ ಹಿಂದಿನ ಸರ್ಕಾರ ಸಾಲ ಮಾಡಿದ್ದನ್ನು ತಿರಿಸುತ್ತಿದ್ದೇವೆ ಎನ್ನುತ್ತಾರೆ. ಹಿಂದಿನ ಸರ್ಕಾರಗಳು 2.30 ಸಾವಿರ ಕೋಟಿ ರೂ. ಮೊತ್ತದ ಆಯಿಲ್ ಬಾಂಡುಗಳನ್ನು ಕೊಂಡುಕೊಂಡಿದ್ದರು. ಇಂಧನ ಹೆಚ್ಚಳದಿಂದ ಕೇಂದ್ರ ಸರ್ಕಾರಕ್ಕೆ ಬಂದಿರುವ ಆದಾಯ ಹಾಗೂ ಹಿಂದಿನ ಸರ್ಕಾರ ಖರೀದಿಸಿದ್ದ ಆಯಿಲ್ ಬಾಂಡುಗಳ ಬೆಲೆಯ ನಡುವಿನ ವ್ಯತ್ಯಾಸವನ್ನು ಸಹ ಜನರಿಗೆ ನಿರ್ಮಲಾ ಸೀತಾರಾಮನ್ ತಿಳಿಸಬೇಕಿದೆ ಎಂದರು.

ಗ್ಯಾಸ್ ಬೆಲೆ 414 ರೂ. ಇತ್ತು. ಆದರೆ ಈಗ ಸುಮಾರು 1000 ರೂ. ತಲುಪಿದೆ. ನಮ್ಮ ಸರ್ಕಾರ ಗ್ಯಾಸ್ ಮೇಲೆ ಶೇ.50 ರಷ್ಟು ಸಬ್ಸಿಡಿ ನೀಡಿದ್ದರು. ಆದರೆ ನರೇಂದ್ರ ಮೋದಿ 2020ರಿಂದ ಸಬ್ಸಿಡಿ ನಿಲ್ಲಿಸಿದ್ದಾರೆ. ಇದರಿಂದಾಗಿಯೇ ಅಡುಗೆ ಅನಿಲದ ಬೆಲೆ ಹೆಚ್ಚಳ ಆಗಿದೆ. ಇದರ ಜತೆ 50 ರೂ. ಹೆಚ್ಚಿಸಿದ್ದಾರೆ. ಈ ದುಬಾರಿ ಬೆಲೆಯಲ್ಲಿ ಜನ ಬದುಕಲು ಸಾಧ್ಯವೇ? ಜನೌಷದ ಬೆಲೆಯನ್ನು ಸಹ ಶೇ.10 ರಷ್ಟು ಹೆಚ್ಚಿಸಲಾಗಿದೆ. ಜನ ನಮ್ಮ ಹಣೆಬರಹ ಅಂತ ಸುಮ್ಮನಾಗಿರಬಹುದು. ನಾವು ಯುಪಿಎ ಸರ್ಕಾರದಲ್ಲಿ ಜನರ ಸಮಸ್ಯೆಗೆ ಯಾವ ರೀತಿ ಸ್ಪಂದಿಸುತ್ತಿದ್ದೆವು. ಈಗಿನ ಸರ್ಕಾರ ಏನು ಮಾಡುತ್ತಿದೆ ಎನ್ನುವುದನ್ನು ಜನ ತಾಳೆಹಾಕಿ ನೋಡಬೇಕಿದೆ. ಇಂದು ದೇಶದಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಜನ ಅರಿಯಬೇಕಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಜನರಿಗೆ ಮೋಸ ಮಾಡುವ ಉದ್ದೇಶದಿಂದ ಸಮಾಜದ ಸಾಮರಸ್ಯ ಕದಡುವ ಹಾಗೂ ಜನರ ದಿಕ್ಕು ತಪ್ಪಿಸುವ ಕಾರ್ಯವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ. ನಿಜವಾಗಿ ಚರ್ಚೆ ಒಳಗಾಗಬೇಕಾದ ವಿಚಾರಗಳನ್ನು ಮರೆಮಾಚಲಾಗುತ್ತಿದೆ. ಕಾಂಗ್ರೆಸ್ ಪಕ್ಷದಿಂದ ಜನಪರ ಹೋರಾಟ ರೂಪಿಸುತ್ತೇವೆ. ರೈತರ, ದಲಿತರ ಪರ ಹೋರಾಟ ಮಾಡುತ್ತೇವೆ. ಬೆಲೆ ಏರಿಕೆಯ ಬೂಟಾಟಿಕೆಯನ್ನ ಕೇಂದ್ರ ಸರ್ಕಾರ ನಿಲ್ಲಿಸಬೇಕು ಸಿದ್ದರಾಮಯ್ಯ ಆಗ್ರಹಿಸಿದರು.

ಇದನ್ನೂ ಓದಿ:ಬಿಬಿಎಂಪಿ: ಇದೇ ಮೊದಲ ಬಾರಿಗೆ ₹3 ಸಾವಿರ ಕೋಟಿ ಆಸ್ತಿ ತೆರಿಗೆ ಸಂಗ್ರಹ

For All Latest Updates

TAGGED:

ABOUT THE AUTHOR

...view details