ನವದೆಹಲಿ/ಬೆಂಗಳೂರು :ದೇಶದ ಜನರ ಹೋರಾಟಕ್ಕೆ ಇದು ಐತಿಹಾಸಿಕ ದಿನ. ಕೃಷಿ ತಿದ್ದುಪಡಿ ಕಾಯ್ದೆಗಳ ವಾಪಸ್ ಸಂಬಂಧ ಬಿಜೆಪಿ ಮೋಸ ಮಾಡಲಿದೆ ಎಂದು ಜನರಲ್ಲಿ ಭಯವಿದೆ. ಸದ್ಯದಲ್ಲೇ ಸಂಸತ್ ಅಧಿವೇಶನ ನಡೆಯಲಿದೆ. ಅವರು ಈ ಬಗ್ಗೆ ನಿರ್ಣಯ ಮಂಡಿಸಲಿ. ಮುಖ್ಯಮಂತ್ರಿ ಇದ್ದಾಗ ಮೋದಿ ಅವರು ಏನು ಹೇಳಿದ್ದಾರೋ ಅದನ್ನು ಮಾಡಲಿ. ಅವರು ನುಡಿದಂತೆ ನಡೆಯಲಿ ಎಂದು ಜನ ಹೇಳುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President DK Shivakumar) ತಿಳಿಸಿದರು.
ಕೇಂದ್ರ ಕೃಷಿ ಕಾಯ್ದೆ ರದ್ದುಗೊಳಿಸಿರುವ ಬಗ್ಗೆ ನವದೆಹಲಿಯಲ್ಲಿ ಮಾತನಾಡಿದ ಅವರು, ಉತ್ತರಪ್ರದೇಶ, ಪಂಜಾಬ್ ಚುನಾವಣೆ ಸಮೀಪಿಸುತ್ತಿವೆ. ಮತದಾರರ ತೀರ್ಪು ಶಕ್ತಿ, ಅಭಿಪ್ರಾಯದ ಮುಂದೆ ಯಾರೂ ನಿಲ್ಲಲು ಸಾಧ್ಯವಿಲ್ಲ. ಅದರಿಂದ ಎಚ್ಚೆತ್ತು ಕೇಂದ್ರ ಈಗ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆದಿದೆ (Repeal of farm laws). ಅವರಿಗೆ ಈಗಲಾದರೂ ಜ್ಞಾನೋದಯವಾಗಿರುವುದಕ್ಕೆ ಧನ್ಯವಾದಗಳು ಎಂದರು.
ಈ ಹೋರಾಟ ಬಿಜೆಪಿಯದ್ದಲ್ಲ. ಹೀಗಾಗಿ, ಈ ಗೆಲುವು ಬಿಜೆಪಿಯದ್ದಲ್ಲ. ಈ ದೇಶದ ರೈತರು, ಕಾಂಗ್ರೆಸ್ ಪಕ್ಷದ ಗೆಲುವು. ಪ್ರತಿಭಟನಾನಿರತ ರೈತರನ್ನು ಭೇಟಿ ಮಾಡಿ ಬೆಂಬಲ ಸೂಚಿಸಿ ಬಂದ ನಂತರ ರಾಹುಲ್ ಗಾಂಧಿ ಅವರು ರೈತರನ್ನು ಬೆಂಬಲಿಸುವಂತೆ ಕರೆ ಕೊಟ್ಟರು.