ಬೆಂಗಳೂರು:ವಿದ್ಯಾಭ್ಯಾಸ ಬಹಳ ಮುಖ್ಯ. ಹಿಜಾಬ್ ವಿಚಾರದಲ್ಲಿ ಮಕ್ಕಳನ್ನು ತಂದೆ-ತಾಯಿಗಳು, ಗುರುಗಳು ಮನವೊಲಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗುರುಗಳು ಹೇಳಿದರೆ ಮಕ್ಕಳು ಕೇಳ್ತಾರೆ. ಕಾಂಗ್ರೆಸ್ ಪಕ್ಷ ಸಂವಿಧಾನದಲ್ಲಿ ಇರುವ ವಿಚಾರಗಳಿಗೆ ಬೆಲೆ ಕೊಡುತ್ತದೆ. ಸಂವಿಧಾನದಲ್ಲಿ ಇರುವ ವಿಚಾರಗಳೇ ನಮ್ಮ ಬೈಬಲ್, ನಮ್ಮ ಕುರಾನ್, ನಮ್ಮ ಭಗವದ್ಗೀತೆ ಎಂದು ಡಿಕೆಶಿ ಹೇಳಿದ್ದಾರೆ.
ಹಿಜಾಬ್ ಮುಸ್ಲಿಂ ಧರ್ಮದ ಅತ್ಯಗತ್ಯ ಭಾಗವಲ್ಲ. ಶಾಲಾ-ಕಾಲೇಜುಗಳಲ್ಲಿ ಮಕ್ಕಳು ಸಮವಸ್ತ್ರ ಮಾತ್ರ ಧರಿಸಬೇಕು ಎಂದು ಸರ್ಕಾರದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ನ್ಯಾಯಾಲಯ ಒಂದು ತೀರ್ಪನ್ನು ಕೊಟ್ಟಿದೆ. ಕೆಲವರು ಅದನ್ನು ಒಪ್ತಾರೆ, ಕೆಲವರು ಒಪ್ಪಲ್ಲ. ಈ ಕೋರ್ಟ್ ತೀರ್ಪಿನ ಬಳಿಕ ಸುಪ್ರೀಂಕೋರ್ಟ್ಗೂ ಹೋಗಲು ಅವಕಾಶವಿದೆ. ನ್ಯಾಯಾಲಯದ ತೀರ್ಪನ್ನು ಸರಿಯಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದು ಡಿಕೆಶಿ ತಿಳಿಸಿದ್ದಾರೆ.