ಬೆಂಗಳೂರು :ಮಹದೇವಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಅಭಿಯಾನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಚಾಲನೆ ನೀಡಿದ್ದಾರೆ. ಕಾಟಂನಲ್ಲೂರಿನ ಎಸ್ಡಿಪಿ ಕಲ್ಯಾಣ ಮಂಟಪದಲ್ಲಿ ಡಿಜಿಟಲ್ ಸದಸ್ಯತ್ವವನ್ನು ಅತೀ ಹೆಚ್ಚು ನೋಂದಣಿ ಮಾಡಿದ ಮುಖಂಡರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಬೆಂಗಳೂರಿನ ವಿಧಾನಸಭಾ ಕ್ಷೇತ್ರದ ಮಹದೇವಪುರದಲ್ಲಿ ಸುಮಾರು 33 ಸಾವಿರ ಮಂದಿ ಕಾಂಗ್ರೆಸ್ ಸದಸ್ಯತ್ವಕ್ಕೆ ನೋಂದಣಿ ಮಾಡಿದ್ದು, ಬೆಂಗಳೂರಿನಲ್ಲಿ ಮೂರನೇ ಅತೀ ದೊಡ್ಡ ಸದಸ್ಯತ್ವ ನೋಂದಣಿ ಮಾಡಿದ ಕ್ಷೇತ್ರವಾಗಿ ಮಹದೇವಪುರ ಹೊರಹೊಮ್ಮಿದೆ. ಸುಮಾರು ಆರು ಲಕ್ಷ ಮತದಾರರನ್ನು ಈ ಕ್ಷೇತ್ರ ಹೊಂದಿದೆ. ಕನಿಷ್ಠ ಒಂದು ಲಕ್ಷ ಮಂದಿಯನ್ನು ನೋಂದಣಿ ಮಾಡಿಸುವಂತೆ ಎಲ್ಲರೂ ಶ್ರಮವಹಿಸಬೇಕೆಂದು ಡಿಕೆಶಿ ಕರೆ ನೀಡಿದ್ದಾರೆ.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಡಿಕೆ ಶಿವಕುಮಾರ್, ಇಂದಿನ ದಿನಗಳಲ್ಲಿ ಮಾಹಿತಿ ಹಾಗೂ ತಂತ್ರಜ್ಞಾನ ಮುಂದುವರೆದಿದ್ದರಿಂದ ಕಾಂಗ್ರೆಸ್ ಪಕ್ಷವು ಡಿಜಿಟಲ್ ಸದಸ್ಯತ್ವ ನೋಂದಣಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಹೆಚ್ಚು ಸದಸ್ಯತ್ವ ಪಡೆಯುವುದರಿಂದ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗುತ್ತದೆ. ಈಗಾಗಲೇ ರಾಜ್ಯದಲ್ಲಿ 47 ಲಕ್ಷ ಸದಸ್ಯತ್ವ ಮಾಡಿದ್ದೇವೆ.
ಮುಂದಿನ ದಿನಗಳಲ್ಲಿ ಮತ್ತಷ್ಟು ನೋಂದಣಿ ಕೆಲಸ ಆಗಬೇಕು. ಕೆಲವು ಮುಖಂಡರು ಸರಿಯಾಗಿ ಮಾಡುತ್ತಿಲ್ಲ. ಓರ್ವ ಮುಖಂಡ ಕನಿಷ್ಟ 200 ಮಂದಿಯ ನೋಂದಣಿ ಮಾಡಬೇಕು ಎಂದರು. ಅತಿ ಹೆಚ್ಚು ಮಂದಿಯ ಸದಸ್ಯತ್ವ ನೋಂದಣಿ ಯಾರು ಮಾಡಿಸುತ್ತಾರೋ ಅವರು ರಾಹುಲ್ ಗಾಂಧಿ ಅವರಿಂದ ವಿಶೇಷ ಬಹುಮಾನ ಪಡೆಯಬಹುದು ಎಂದು ಡಿಕೆಶಿ ತಿಳಿಸಿದರು. ಈಗಾಗಲೇ ಕರ್ನಾಟಕದಲ್ಲಿ ಎಲ್ಲಾ ತಯಾರಿ ನಡೆಸಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ರಾಹುಲ್ ಗಾಂಧಿ ರಾಜ್ಯ ಪ್ರವಾಸ :ಎಐಸಿಸಿ ಮುಖಂಡ ರಾಹುಲ್ ಗಾಂಧಿ ರಾಜ್ಯ ಪ್ರವಾಸದ ಬಗ್ಗೆ ಡಿ.ಕೆ.ಶಿವಕುಮಾರ್ ವಿವರಿಸಿದ್ದು, ಮಾರ್ಚ್ 31ರಂದು ಸಿದ್ದಗಂಗಾ ಶ್ರೀಗಳ ಗುರುವಂದನಾ ಕಾರ್ಯಕ್ರಮಕ್ಕೆ ಮಧ್ಯಾಹ್ನ 3ಕ್ಕೆ ತುಮಕೂರಿನ ಸಿದ್ದಗಂಗಾ ಮಠಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿ, ಪ್ರಸಾದ ಸ್ವೀಕಾರ ಮಾಡಲಿದ್ದಾರೆ. ನಂತರ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿ, ಬಿಬಿಎಂಪಿ ಚುನಾವಣೆ ಕುರಿತು ಚರ್ಚೆ ನಡೆಸಲಿದ್ದಾರೆ ಎಂದಿದ್ದಾರೆ.
ಏಪ್ರಿಲ್ 1ರಂದು ಕಾಂಗ್ರೆಸ್ ಸಭೆ ನಡೆಯಲಿದ್ದು, ರಾಹುಲ್ ಗಾಂಧಿ ಭಾಗಿ ಆಗಲಿದ್ದು, ಈ ಹಿಂದಿನ ಚುನಾವಣೆಗಳಲ್ಲಿ ಗೆದ್ದ-ಸೋತವರ ಜೊತೆ ಸಂವಾದ ನಡೆಸಲಿದ್ದಾರೆ. ನಂತರ ಜೂಮ್ ಮೂಲಕ ಕಾರ್ಯಕರ್ತರ ಜೊತೆ ಸಂವಾದ ನಡೆಸುವುದರ ಜೊತೆಗೆ ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಸಕ್ರಿಯರಾಗಿರುವವರ ಜೊತೆಗೆ ಮಾತುಕತೆ ನಡೆಸಲಿದ್ದಾರೆ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ:ಸಂಘರ್ಷದ ವಾತಾವರಣದಲ್ಲಿಯೂ ಶಾಂತಿ - ಸುವ್ಯವಸ್ಥೆ ಕಾಪಾಡಿದ್ದೇವೆ: ಸಿಎಂ ಬೊಮ್ಮಾಯಿ