ಕರ್ನಾಟಕ

karnataka

ETV Bharat / city

ಕೊರೊನಾಗೆ ಸೆಡ್ಡು: ನಿರಂತರ ಚಟುವಟಿಕೆಯಿಂದ ಗಮನ ಸೆಳೆಯುತ್ತಿರುವ ಡಿಕೆಶಿ - Bangalore News

ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರಿಗೂ ಕೊರೊನಾ ಸೋಂಕು ತಗುಲಿದ ಹಿನ್ನೆಲೆ, ಬಿಜೆಪಿ ಹಾಗೂ ಜೆಡಿಎಸ್​ ನಾಯಕರಲ್ಲಿ ಆತಂಕ ಹೆಚ್ಚಿದೆ. ಆದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತ್ರ ನಿರಂತರ ಚಟುವಟಿಕೆಯಿಂದ ಗಮನ ಸೆಳೆಯುತ್ತಿದ್ದಾರೆ.

KPCC President DK Shivakumar  district tours
ಕೊರೊನಾಗೆ ಸೆಡ್ಡು ಹೊಡೆದು ನಿರಂತರ ಚಟುವಟಿಕೆಯಿಂದ ಗಮನಸೆಳೆಯುತ್ತಿರುವ ಡಿಕೆಶಿ

By

Published : Aug 3, 2020, 10:55 PM IST

ಬೆಂಗಳೂರು:ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರಿಗೆ ಕೊರೊನಾ ಆವರಿಸಿರುವ ಹಿನ್ನೆಲೆ, ಬಿಜೆಪಿ ಹಾಗೂ ಜೆಡಿಎಸ್​ ನಾಯಕರಲ್ಲಿ ಆತಂಕ ಮನೆಮಾಡಿದೆ. ಆದರೆ, ಕಾಂಗ್ರೆಸ್ ಚಟುವಟಿಕೆಗೆ ಯಾವುದೇ ಭಂಗ ಎದುರಾಗಿಲ್ಲ.

ಕೊರೊನಾಗೆ ಸೆಡ್ಡು ಹೊಡೆದಂತೆ ಕನಕಪುರ ಬಂಡೆ ಖ್ಯಾತಿಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿರಂತರ ಚಟುವಟಿಕೆಯಿಂದ ಗಮನ ಸೆಳೆಯುತ್ತಿದ್ದಾರೆ.

ಕೊರೊನಾಗೆ ಸೆಡ್ಡು ಹೊಡೆದು ನಿರಂತರ ಚಟುವಟಿಕೆಯಿಂದ ಗಮನಸೆಳೆಯುತ್ತಿರುವ ಡಿಕೆಶಿ

ಕಳೆದೆರಡು ದಿನ ದಕ್ಷಿಣಕನ್ನಡ ಜಿಲ್ಲಾ ಪ್ರವಾಸ ಮುಗಿಸಿ ಹಿಂತಿರುಗಿರುವ ಡಿಕೆಶಿ, ಕೆಪಿಸಿಸಿ ಕಚೇರಿಯಲ್ಲಿ ಒಂದೆರಡು ಸಭೆ ನಡೆಸಿದ್ದಾರೆ. ಅಲ್ಲದೆ, ತಮ್ಮ ಭೇಟಿಗೆ ಆಗಮಿಸಿದ್ದ ಹಾಸಿಗೆ ಹೊಲಿಯುವ ವೃತ್ತಿ ಅವಲಂಬಿತರನ್ನು ಭೇಟಿ ಮಾಡಿ ಅಹವಾಲು ಆಲಿಸಿದ್ದಾರೆ. ಪಕ್ಷದ ಕಚೇರಿ ಇರಲಿ, ಸದಾಶಿವನಗರ ನಿವಾಸದ ಇರಲಿ ಅಥವಾ ಜಿಲ್ಲಾ ಪ್ರವಾಸ ಕೈಗೊಂಡ ಸಂದರ್ಭದಲ್ಲಿರಲಿ ಮಾಸ್ಕ್​ ಧರಿಸುವುದನ್ನು ಬಹುತೇಕ ನಿರ್ಲಕ್ಷಿಸಿರುವ ಅವರು, ಕೋವಿಡ್-19ಗೆ ಸೆಡ್ಡು ಹೊಡೆಯುವ ರೀತಿ ಓಡಾಡಿಕೊಂಡಿದ್ದಾರೆ.

ಸೋಮವಾರ ತಮ್ಮನ್ನು ಭೇಟಿಯಾದ ನಿಯೋಗದ ಜೊತೆ ಮಾತುಕತೆ ನಡೆಸುವ ಸಂದರ್ಭದಲ್ಲಿಯೂ ಅವರು ಮಾಸ್ಕ್ ಧರಿಸಿರಲಿಲ್ಲ. ಇತ್ತೀಚೆಗಷ್ಟೇ ಚೇತರಿಸಿಕೊಂಡಿರುವ ದಕ್ಷಿಣಕನ್ನಡ ಜಿಲ್ಲೆಯ ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ ಜೊತೆ ಒಂದು ದಿನ ಹಾಗೂ ಇನ್ನೊಂದು ದಿನ ಕೋವಿಡ್​ಗೆ ಒಳಗಾದ ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಜೊತೆ ಕಾಲ ಕಳೆದಿದ್ದಾರೆ. ವಿಪರ್ಯಾಸ ಅಂದ್ರೆ ಈ ಸಂದರ್ಭದಲ್ಲಿ ಬಹುತೇಕ ಸಮಯ ಇಬ್ಬರೂ ಮಾಸ್ಕ್ ಧರಿಸಿರಲಿಲ್ಲ. ಒಟ್ಟಾರೆ ರಾಜ್ಯ ಕಾಂಗ್ರೆಸ್ ಪಕ್ಷದ ಇತರೆ ನಾಯಕರು ಒಂದು ಹಂತಕ್ಕೆ ಕೊರೊನಾಗೆ ಹೆದರಿ ಮನೆಯಲ್ಲಿ ಕುಳಿತಿದ್ದರೆ, ಡಿಕೆಶಿ ಮಾತ್ರ ಸರಣಿ ಪ್ರವಾಸ ಕೈಗೊಳ್ಳುತ್ತಲೇ ಇದ್ದಾರೆ.

ಮಂಗಳವಾರ ಮತ್ತೆ ಪ್ರವಾಸ: ಎರಡು ದಿನ ದಕ್ಷಿಣಕನ್ನಡ ಜಿಲ್ಲಾ ಪ್ರವಾಸ ಮುಗಿಸಿ ಭಾನುವಾರ ಬೆಂಗಳೂರಿಗೆ ಆಗಮಿಸಿದ್ದ ಡಿಕೆಶಿ, ಸೋಮವಾರ ದಿನವಿಡೀ ಕೆಪಿಸಿಸಿ ಕಚೇರಿಯಲ್ಲಿದ್ದರು. ಮಂಗಳವಾರ ಮತ್ತೆ ಕಲಬುರಗಿ ಪ್ರವಾಸಕ್ಕೆ ತೆರಳಲು ಸಜ್ಜಾಗಿ ನಿಂತಿದ್ದಾರೆ. ಬೆಳಗ್ಗೆ 8:40ಕ್ಕೆ ಬೆಂಗಳೂರಿನಿಂದ ಹೊರಟು, ಕಲಬುರಗಿಗೆ ತೆರಳುವ ಅವರು ಟೆಂಪಲ್ ರನ್ ನಡೆಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಗಾಣಗಾಪುರ ದತ್ತಾತ್ರೇಯ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಕಲಬುರಗಿ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಇದಾದ ಬಳಿಕ 1:30ಕ್ಕೆ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಸುವ ಅವರು, ಸಂಜೆ 3 ಗಂಟೆಗೆ ಶರಣಬಸಪ್ಪ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ. ಇದಾದ ನಂತರ ಕೆಬಿಎನ್ ದರ್ಗಾಕ್ಕೆ ಭೇಟಿ ನೀಡಲಿದ್ದಾರೆ. ಸಂಜೆ 4 ಗಂಟೆಗೆ ಹೈದರಾಬಾದ್-ಕರ್ನಾಟಕ ಎಜುಕೇಶನ್ ಸೊಸೈಟಿ ಮುಖ್ಯಸ್ಥರನ್ನು ಭೇಟಿ ಮಾಡಲಿದ್ದಾರೆ. ರಾತ್ರಿ 8:30ಕ್ಕೆ ಕಲಬುರಗಿಯಿಂದ ಬೆಂಗಳೂರಿಗೆ ಹಿಂತಿರುಗಲಿದ್ದಾರೆ.

ABOUT THE AUTHOR

...view details