ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ಮದುವೆ ಸಂಭ್ರಮ ಮನೆಮಾಡಿದ್ದು, ವಿವಾಹದ ತಯಾರಿ ಭರ್ಜರಿಯಾಗಿ ನಡೆದಿದೆ.
ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಮದುವೆ ಸಂಭ್ರಮ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಹಿರಿಯ ಪುತ್ರಿ ಐಶ್ವರ್ಯ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಳಿಯ, ಕಾಫಿ ಡೇ ಸಂಸ್ಥಾಪಕ ದಿವಂಗತ ವಿ.ಜಿ. ಸಿದ್ದಾರ್ಥ ಹೆಗ್ಡೆ ಅವರ ಹಿರಿಯ ಪುತ್ರ ಅಮಾರ್ಥ್ಯ ಹೆಗ್ಡೆ ಅವರ ವಿವಾಹ ಕಾರ್ಯಕ್ರಮದ ಸಿದ್ಧತೆ ಭರದಿಂದ ಸಾಗಿದೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಫೆ.14 ರಂದು ವಿವಾಹ ಕಾರ್ಯಕ್ರಮ ನೆರವೇರಲಿದೆ. ಶಿವಕುಮಾರ್ ಅವರ ಸದಾಶಿವನಗರದ ನಿವಾಸದ ಮುಂಭಾಗ ಚಪ್ಪರ ಹಾಕಲಾಗಿದ್ದು, ಮದುವೆ ಸಂಭ‍್ರಮ ಕಳೆಗಟ್ಟಿದೆ. ಅರಮನೆ ಮೈದಾನದಲ್ಲಿ ಎಲ್ಲಾ ವೈವಾಹಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಸಂಭ್ರಮ ಮನೆಮಾಡಿದೆ. ಜೊತೆಗೆ ವಿವಾಹ ಸಿದ್ಧತೆ ಕೂಡ ಜೋರಾಗಿಯೇ ನಡೆಯುತ್ತಿದೆ.
ಫೆ.12 ರಂದು ಮೆಹಂದಿ ಕಾರ್ಯಕ್ರಮ ನಡೆಯಲಿದ್ದು, ಫೆ.13 ರಂದು ನಿವಾಸದಲ್ಲೇ ಜೋಡಿಗೆ ಎಣ್ಣೆ ಶಾಸ್ತ್ರ, ಫೆ.14 ರಂದು ಹೋಟೆಲ್ ಶೆರಟಾನ್ನಲ್ಲಿ ಶುಭ ಮುಹೂರ್ತ, ಫೆ.17 ರಂದು ಪ್ರೆಸ್ಟೀಜ್ ಗಾಲ್ಫ್ ಶೈರ್ನಲ್ಲಿ ಆರತಕ್ಷತೆ, ಫೆ.20 ರಂದು ಅರಮನೆ ಮೈದಾನದಲ್ಲಿ ಬೀಗರ ಔತಣ ಕೂಟ ಜರುಗಲಿದೆ.