ಬೆಂಗಳೂರು :ನಾವು ಸೋತಿರುವ ಕ್ಷೇತ್ರಗಳಲ್ಲಿ ಮತ ಪ್ರಮಾಣ ನೋಡಿದರೆ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದೆ.
ಕಾಂಗ್ರೆಸ್‌ನ ಒಗ್ಗಟ್ಟಿನ ಹೋರಾಟದ ಫಲವಾಗಿ ಈ ಫಲಿತಾಂಶ ಬಂದಿದೆ.. ಡಿ ಕೆ ಶಿವಕುಮಾರ್ ಆಡಳಿತ ಪಕ್ಷಕ್ಕೆ ಹಲವಾರು ಅನುಕೂಲಗಳು ಇರುತ್ತವೆ ಎಂಬುದು ನಮಗೆ ತಿಳಿದಿದೆ. ವಿಧಾನ ಪರಿಷತ್ತಿನಲ್ಲಿ ಬಹುಮತದ ಬಗ್ಗೆ ನಾವು ಲೆಕ್ಕ ಹಾಕಿಲ್ಲ. ಬಿಜೆಪಿ ಸರ್ಕಾರ ವಾಮಮಾರ್ಗದಲ್ಲಿ ಅಧಿಕಾರಕ್ಕೆ ಬಂದಿದೆ. ಬಹುಮತ ಇಲ್ಲದಿದ್ದರೂ ಅಧಿಕಾರ ಹಿಡಿದಿದ್ದಾರೆ. ನಾವು ಪ್ರತಿಪಕ್ಷದಲ್ಲಿದ್ದೇವೆ. ಆದರೆ, ಮತದಾರರು ಈ ಚುನಾವಣೆಯಲ್ಲಿ ಬದಲಾವಣೆ ಬಯಸಿರುವ ಸಂದೇಶ ನೀಡಿದ್ದಾರೆ ಎಂದರು.
ನಾವು ದುಡ್ಡಿನ ಮೇಲೆ ರಾಜಕಾರಣ ಮಾಡಿಲ್ಲ. ದುಡ್ಡೇ ದೊಡ್ಡಪ್ಪ ಎನ್ನುವವರು ಬಿಜೆಪಿಯವರು. ನಾವು ಬಡತನ ನಿರ್ಮೂಲನೆ, ಅಭಿವೃದ್ಧಿ ಆಧಾರದ ಮೇಲೆ ರಾಜಕಾರಣ ಮಾಡುತ್ತೇವೆ. ಪಂಚಾಯತ್‌ನಲ್ಲಿ ಬಿಜೆಪಿ ಪ್ರಾಬಲ್ಯ ಇರುವ ಕಡೆಗಳಲ್ಲೂ ನಾವು ಕಡಿಮೆ ಅಂತರದಲ್ಲಿ ಸೋತಿದ್ದೇವೆ ಎಂದರು.
ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಪ್ರಸ್ತಾಪ ವಿಚಾರವಾಗಿ ಕೇಳಿದ ಪ್ರಶ್ನೆಗೆ, 'ನಾವು ಮತಾಂತರ ನಿಷೇಧ ಕಾಯ್ದೆ ವಿರೋಧಿಸುತ್ತೇವೆ. ಇದು ಒಂದು ಧರ್ಮದ ವಿಚಾರವಲ್ಲ. ಯಾವ ಧರ್ಮಕ್ಕೂ ನೋವಾಗಬಾರದು. ಸಂವಿಧಾನದ ಹೆಸರಲ್ಲಿ ಪ್ರಮಾಣ ಮಾಡಿದವರು ಈಗ ಅದರ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಇದನ್ನೂ ಓದಿ: ಎಇ ಪರೀಕ್ಷೆ ಬರೆಯಲು ಅಭ್ಯರ್ಥಿಗಳಿಗೆ ಮತ್ತೊಮ್ಮೆ ಅವಕಾಶ : ಸಚಿವ ಮಾಧುಸ್ವಾಮಿ
ಈ ಕಾಯ್ದೆ ಜಾರಿಗೆ ತಂದರೆ ಭವಿಷ್ಯದಲ್ಲಿ ರಾಜ್ಯದ ಬಂಡವಾಳ ಹೂಡಿಕೆ ಮೇಲೆ ಬಹಳ ಮಾರಕ ಪರಿಣಾಮ ಉಂಟಾಗಲಿದೆ. ಇದು ಕೇವಲ ಬಿಜೆಪಿ ವಿಚಾರವಲ್ಲ, ರಾಜ್ಯದ ವಿಚಾರ. ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಧರ್ಮ ಯಾವುದಾದರೂ ದೈವ ಒಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ. ಕರ್ಮ ಯಾವುದಾದರೂ ನಿಷ್ಠೆ ಒಂದೇ. ದೇವನೊಬ್ಬ ನಾಮ ಹಲವು ಎಂದರು.
ಈ ಹಿಂದೆ ಜೆಡಿಎಸ್ ಜತೆಗಿನ ಮೈತ್ರಿ ಬಗ್ಗೆ ಕೇಳಿದ ಪ್ರಶ್ನೆಗೆ, 'ಪಕ್ಷಕ್ಕೆ ಅದರದೇ ಆದ ನೀತಿಗಳಿರುತ್ತವೆ. ಈ ಹಿಂದೆ ರಾಹುಲ್ ಗಾಂಧಿ ಅವರು ತೆಗೆದುಕೊಂಡ ತೀರ್ಮಾನವನ್ನು ನಾವೆಲ್ಲರೂ ಒಪ್ಪಿ ನಡೆದುಕೊಂಡಿದ್ದೇವೆ. ಈ ಹಿಂದೆ ತೆಗೆದುಕೊಂಡ ತೀರ್ಮಾನ ಸರಿಯೋ, ತಪ್ಪೋ ಆ ಬಗ್ಗೆ ಈಗ ಚರ್ಚೆ ಅಗತ್ಯವಿಲ್ಲ' ಎಂದರು.