ಬೆಂಗಳೂರು: ಜೂನ್ 1 ರಿಂದ ಕೇವಲ ಮುಜರಾಯಿ ಇಲಾಖೆಯ ದೇವಾಲಯಗಳು ಮಾತ್ರವಲ್ಲದೇ ಎಲ್ಲಾ ಹಿಂದೂ ದೇವಾಲಯಗಳ ಬಾಗಿಲು ತೆರೆಯಲಿದ್ದು ಚರ್ಚ್, ಮಸೀದಿಗಳಿಗೂ ಷರತ್ತು ಬದ್ಧ ಅವಕಾಶ ಕಲ್ಪಿಸಲಾಗುತ್ತದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸುಳಿವು ನೀಡಿದ್ದಾರೆ.
ದೇವಾಲಯಗಳು ತೆರೆಯುವ ಕುರಿತು ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳ ಬಾಗಿಲುಗಳು ಜೂನ್ 1 ರಿಂದ ತೆರೆಯುತ್ತಿದ್ದು, ಜೊತೆಗೆ ಇತರ ಖಾಸಗಿ ದೇವಾಲಯಗಳ ಬಾಗಿಲುಗಳು ಕೂಡ ತೆರೆಯಲಿವೆ. ರಾಜ್ಯದಲ್ಲಿ ಅಂದಾಜು 53 ಸಾವಿರ ಹಿಂದೂ ದೇವಾಲಯಗಳಿರುವ ಮಾಹಿತಿ ಇದ್ದು, ಎಲ್ಲ ದೇಗುಲಗಳಲ್ಲೂ ಲಾಕ್ಡೌನ್ 4.0 ಮುಕ್ತಾಯವಾಗುತ್ತದ್ದಂತೆ ದೇವಸ್ಥಾನಗಳಲ್ಲಿ ದೇವರ ದರ್ಶನ ಭಾಗ್ಯಕ್ಕೆ ಅವಕಾಶ ಸಿಗಲಿದೆ. ಮುಜರಾಯಿ ಇಲಾಖೆಯ ದೇವಾಲಯಗಳ ಆರಂಭಕ್ಕೆ ಅವಕಾಶ ಎನ್ನುವ ಘೋಷಣೆ ಹಿನ್ನೆಲೆಯಲ್ಲಿ ಇತರ ಖಾಸಗಿ ದೇವಾಲಯಗಳ ತೆರೆಯುವ ಕುರಿತು ಅನುಮಾನ ವ್ಯಕ್ತವಾಗಿತ್ತು. ಇದಕ್ಕೆ ಕೋಟ ಶ್ರೀನಿವಾಸ ಪೂಜಾರಿ ತೆರೆ ಎಳೆದಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಪೂಜಾರಿ, ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳ ಜೊತೆಗೆ ಖಾಸಗಿ ದೇವಾಲಯಗಳನ್ನೂ ತೆರೆದು ಪೂಜೆ ಪುರಸ್ಕಾರ ಆರಂಭಿಸಲಾಗುತ್ತದೆ. ಸಾಮಾಜಿಕ ಅಂತರ ಹಾಗೂ ಸ್ವಚ್ಛತೆ ಕಾಪಾಡಿಕೊಂಡು ವ್ಯವಸ್ಥಿತ ರೀತಿಯಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಇನ್ನು ಕೇವಲ ಹಿಂದೂ ದೇವಾಲಯಗಳನ್ನು ಮಾತ್ರ ಆರಂಭಿಸಿದಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿದ್ದು, ಇದಕ್ಕೂ ಸಚಿವರು ಸ್ಪಷ್ಟೀಕರಣ ನೀಡಿದ್ದಾರೆ.
ಇನ್ನು ನನ್ನ ಇಲಾಖೆಯ ವ್ಯಾಪ್ತಿಯಲ್ಲಿ ಕೇವಲ ಹಿಂದೂ ದೇವಾಲಯಗಳು ಮಾತ್ರ ಬರಲಿವೆ, ಧಾರ್ಮಿಕ ದತ್ತಿ ವ್ಯಾಪ್ತಿಯಲ್ಲಿ ನಾನು ಹೇಳಿಕೆ ನೀಡಿದ್ದೇನೆ. ಚರ್ಚ್ ಹಾಗೂ ಮಸೀದಿ ಕುರಿತು ಸಂಬಂಧಪಟ್ಟ ಸಚಿವರು ಮಾಹಿತಿ ನೀಡಲಿದ್ದಾರೆ. ನಾನು ನನ್ನ ಅಧಿಕಾರದ ವ್ಯಾಪ್ತಿಯಲ್ಲಿ ಹೇಳಿದ್ದೇನೆ. ನಮ್ಮಲ್ಲಿ ಗೊಂದಲ ಇಲ್ಲ ಎನ್ನುವ ಮೂಲಕ ಎಲ್ಲ ಪ್ರಾರ್ಥನಾ ಮಂದಿರಗಳು ತೆರೆಯುವ ಸುಳಿವು ನೀಡಿದರು. ಇದಕ್ಕೆ ಪೂರಕವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೇವಾಲಯ ಎಂದರೆ ಎಲ್ಲಾ ಧರ್ಮದ ಪ್ರಾರ್ಥನಾಲಯ ಎಂದೇ ಅರ್ಥ, ನಮ್ಮದು ಸರ್ವ ಧರ್ಮ ಸಹಿಷ್ಣು ರಾಜ್ಯ ಎಂದಿರುವುದು ಜೂನ್ 1 ರಂದು ದೇವಾಲಯಗಳ ಜೊತೆ ಚರ್ಚ್, ಮಸೀದಿ ಬಾಗಿಲುಗಳು ಕೂಡ ತೆರೆಯಲಿವೆ ಎನ್ನುವುದಕ್ಕೆ ಪುಷ್ಟಿ ನೀಡಿದೆ.