ಬೆಂಗಳೂರು: ಇತ್ತೀಚೆಗೆ ಬೀದಿನಾಯಿ ಮೇಲೆ ಕಾರು ಹತ್ತಿಸಿ ಮೃಗೀಯ ವರ್ತನೆ ತೋರಿದ್ದ ಘಟನೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಅದೇ ರೀತಿ ನಗರದಲ್ಲಿ ಎರಡು ತಿಂಗಳ ನಾಯಿಮರಿ ಮೇಲೆ ಹಲ್ಲೆ ನಡೆಸಿ ನೆರೆಹೊರೆ ಮನೆಯವರು ನಾಯಿ ಕಾಣೆಯಾಗುವಂತೆ ಮಾಡಿದ್ದಾರೆ ಎಂದು ಆರೋಪಿಸಿ ಮಾಲೀಕರು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಕೋರಮಂಗಲ ಪೊಲೀಸರು ನಾಯಿಮರಿಯನ್ನು ಪತ್ತೆ ಹಚ್ಚಿದ್ದಾರೆ.
ಕೋರಮಂಗಲ ನಿವಾಸಿಯಾಗಿರುವ ಜೋ ಜೆಸಿಂತಾ ಜ್ಞಾನಕುಮಾರಿ ಎಂಬುವರು ದೂರು ನೀಡಿದ ಮೇರೆಗೆ ನೆರೆಮನೆ ನಿವಾಸಿ ರವಿಶಂಕರ್ ವಿರುದ್ಧ ಪ್ರಾಣಿಗಳ ಮೇಲೆ ದೌರ್ಜನ್ಯ ತಡೆ ಕಾಯ್ದೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಜೆಸಿಂತಾ ಅನಾರೋಗ್ಯದಲ್ಲಿದ್ದ ಬೀದಿ ನಾಯಿಯನ್ನು ಔಷಧೋಪಚಾರ ನೀಡಿ, ಆರೈಕೆ ಮಾಡಿದ್ದರು. ಇದಕ್ಕೆ ಸ್ಥಳೀಯರ ತೀವ್ರ ವಿರೋಧ ಇತ್ತು. ವಾಸವಾಗಿರುವ ಮನೆ ಮಾಲೀಕರು ನಾಯಿ ಸಾಕಿದ್ದರಿಂದ ಮನೆಯೊಳಗೆ ಇರಿಸಲು ಅವಕಾಶ ನೀಡಿರಲಿಲ್ಲ. ಹೀಗಾಗಿ ಮನೆ ಮುಂದಿನ ರಸ್ತೆಯಲ್ಲಿ ನಾಯಿಯನ್ನು ಬಿಟ್ಟಿದ್ದರು.
ನಾಯಿ ಬೊಗಳಿ ಎಲ್ಲೆಂದರಲ್ಲಿ ಗಲೀಜು ಮಾಡಲಿದೆ ಎಂದು ನೆರೆಹೊರೆಯವರು ಕ್ಯಾತೆ ತೆಗೆದು ಶ್ವಾನ ಸಾಕದಂತೆ ತಾಕೀತು ಮಾಡಿದ್ದರು. ಅಲ್ಲದೆ ನಾಯಿಮರಿಗೆ ಔಷಧಿ ನೀಡಲು ಹಾಗೂ ಊಟ ಕೊಡಲು ಬಿಡದೇ ಪಕ್ಕದ ಮನೆ ನಿವಾಸಿ ರವಿಶಂಕರ್ ಎಂಬುವರು ಅಸಭ್ಯ ಪದಗಳಿಂದ ನಿಂದಿಸಿದ್ದಾರೆ. ನಾಯಿಮರಿಗೆ ಹೊಡೆದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಜೆಸಿಂತಾ ಕೋರಮಂಗಲ ಪೊಲೀಸರಿಗೆ ಕಳೆದ ಶುಕ್ರವಾರ ದೂರು ನೀಡಿದ್ದರು.
ಠಾಣೆಯಿಂದ ಮನೆ ಬಳಿ ಬಂದಾಗ ನಾಯಿ ಮರಿ ಕಾಣೆಯಾಗಿರುವುದನ್ನು ಕಂಡು ಕೃತ್ಯದ ಹಿಂದೆ ರವಿಶಂಕರ್ ಕೈಚಳಕವಿದೆ ಎಂದು ಶಂಕಿಸಿ ಅವರ ವಿರುದ್ಧ ದೂರು ನೀಡಿದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಕೋರಮಂಗಲ ಪಿಎಸ್ಐ ಶಿವಪ್ಪ, ಕಾನ್ಸ್ಟೇಬಲ್ ಪವನ್ ನೇತೃತ್ವದ ತಂಡ ಕಳೆದುಹೋಗಿದ್ದ ನಾಯಿಮರಿ ಶೋಧಕ್ಕಿಳಿದಿತ್ತು. ಸತತ ಎಂಟು ಗಂಟೆಗಳಿಂದ ನಿರಂತರವಾಗಿ ಹುಡುಕಾಡಿ ಕೊನೆಗೆ ವಾಸವಿದ್ದ ಮನೆಯಿಂದ ಮೂರು ಕಿಲೋಮೀಟರ್ ದೂರದ ಅಂಬೇಡ್ಕರ್ ಪಾರ್ಕ್ ಬಳಿ ಇರುವುದನ್ನು ಪತ್ತೆ ಹಚ್ಚಿ ಮಾಲೀಕರ ನಾಯಿಯನ್ನು ಪೊಲೀಸರು ಹಸ್ತಾಂತರಿಸಿದ್ದಾರೆ. ಘಟನೆ ಸಂಬಂಧ ನಾಯಿ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿರುವ ರವಿಶಂಕರ್ ಅವರನ್ನು ಕರೆಯಿಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ:ಗದಗ: ಪ್ರವಾಸಕ್ಕೆ ಬಂದ ಇಬ್ಬರು ವಿದ್ಯಾರ್ಥಿಗಳು ನದಿನೀರು ಪಾಲು