ಬೆಂಗಳೂರು: ಮಹಾನಗರಿ ಬೆಂಗಳೂರಿನಲ್ಲಿ ಮಳೆ ಬಂತು ಎಂದರೆ ಸಾಕು ಅವಾಂತರಗಳ ಸರಮಾಲೆಯೇ ಸೃಷ್ಟಿಯಾಗುತ್ತದೆ. ಅಂತೆಯೇ, ಇತ್ತೀಚೆಗೆ ಸುರಿದ ಮಳೆಯಿಂದಾಗಿ ಕೊಡಿಗೇಹಳ್ಳಿ ರೈಲ್ವೆ ಅಂಡರ್ ಪಾಸ್ ಕೆರೆಯಾಗಿ ಮಾರ್ಪಾಡಾಗಿತ್ತು
ಬಿಬಿಎಂಪಿ ವಾರ್ಡ್ ನಂ.8ರ ವ್ಯಾಪ್ತಿಗೆ ಬರುವ ಕೊಡಿಗೇಹಳ್ಳಿ ರೈಲ್ವೆ ಅಂಡರ್ಪಾಸ್ ಮಳೆ ನೀರು ತುಂಬಿ, ಬಂದ್ ಆಗಿದೆ. ಬಿಬಿಎಂಪಿ ಹಾಗೂ ಜಲಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೊಡಿಗೇಹಳ್ಳಿಯಿಂದ ತಿಂಡ್ಲುಗೆ ಸಂಪರ್ಕ ಕಲ್ಪಿಸುವ ಅಂಡರ್ ಪಾಸ್ ರಸ್ತೆ ಇದಾಗಿದ್ದು, ಬಸ್, ಕಾರು, ಬೈಕ್ ಸೇರಿದಂತೆ ಸಾವಿರಾರು ವಾಹನಗಳು ನಿತ್ಯ ಸಂಚರಿಸುತ್ತವೆ. ಕಳಪೆ ಕಾಮಗಾರಿಯಿಂದಾಗಿ ಮಳೆ ನೀರು ಹೊರ ಹೋಗುವ ಪೈಪ್ಗಳು ಬ್ಲಾಕ್ ಆಗಿದ್ದು, ನೀರು ಶೇಖರಣೆಯಾಗಿ ಅಂಡರ್ ಪಾಸ್ ಕೆರೆಯಂತಾಗಿದೆ.
ಕೆಟ್ಟು ನಿಂತ ವಾಹನಗಳು:
ಮಳೆ ನೀರು ತುಂಬಿರುವ ಅಂಡರ್ ಪಾಸ್ ಮೂಲಕ ಸಂಚರಿಸಲು ಪ್ರಯತ್ನಿಸಿದ ಬೈಕ್, ಸ್ಕೂಟಿ, ಒಮಿನಿ ಸೇರಿದಂತೆ ನೂರಾರು ವಾಹನಗಳು ಕೆಟ್ಟು ನಿಂತಿವೆ. ಕಳೆದೆರಡು ದಿನಗಳಿಂದಲೂ ಇದೇ ಸಮಸ್ಯೆಯಾಗಿದ್ದು, ಯಾವೊಬ್ಬ ಅಧಿಕಾರಿಯೂ ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ