ಕರ್ನಾಟಕ

karnataka

ETV Bharat / city

ನಂದಿನಿ ಹಾಲು ಪೂರೈಕೆ ಸ್ಥಗಿತ ಸುದ್ದಿ ನಿರಾಧಾರ: ಕೆಎಂಎಫ್ ನಿರ್ದೇಶಕ ಬಿ.ಸಿ. ಸತೀಶ್ - ಲಾಕ್​ಡೌನ್​​ನಿಂದಾಗಿ ನಂದಿನಿ ಹಾಲು ಮಾರಾಟ

ಹಾಲಿನ ಪ್ಯಾಕೆಟ್ ಮಾರಾಟ, ಬೆಣ್ಣೆ, ತುಪ್ಪ, ಎಲ್ಲಾ ಹಾಲಿನ ಉತ್ಪನ್ನಗಳ ತಯಾರಿಕೆ ಸೇರಿ, ಸುಮಾರು 45 ಲಕ್ಷ ಲೀಟರ್ ಬಳಕೆಯಾಗುತ್ತಿದೆ. ಉಳಿದ ಸುಮಾರು 35 ಲಕ್ಷ ಲೀಟರ್‌ ಹಾಲನ್ನು ಪ್ರತಿನಿತ್ಯ ಪುಡಿಯಾಗಿ ಪರಿವರ್ತಿಸಲಾಗುತ್ತಿದೆ ಎಂದು ಕೆಎಂಎಫ್ ಎಂಡಿ ಬಿ.ಸಿ. ಸತೀಶ್ ಹೇಳಿದರು.

KMF Director B.C. Satish talk
ಕೆಎಂಎಫ್ ನಿರ್ದೇಶಕ ಬಿ.ಸಿ. ಸತೀಶ್

By

Published : May 28, 2021, 9:11 PM IST

ಬೆಂಗಳೂರು:ಲಾಕ್​ಡೌನ್​​ನಿಂದಾಗಿ ನಂದಿನಿ ಹಾಲು ಮಾರಾಟ ಕುಸಿದಿದ್ದು, ಒಕ್ಕೂಟಗಳಿಗೆ ಬರುತ್ತಿರುವ ಹಾಲಿನ ಪ್ರಮಾಣ ಹೆಚ್ಚುತ್ತಲೇ ಇದೆ. ಆದರೆ ವಾರಕ್ಕೆ ಎರಡು ದಿನ ಪೂರೈಕೆ ಸ್ಥಗಿತಕ್ಕೆ ಕೆ.ಎಂ.ಎಫ್ ನಿರ್ಧರಿಸಿದೆ ಎನ್ನುವ ಸುದ್ದಿ ನಿರಾಧಾರ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್ ತಿಳಿಸಿದರು.

ಓದಿ: ಉತ್ಪಾದನೆಯಲ್ಲಿ ಹೆಚ್ಚಳ: ಹಾಲು ಖರೀದಿ ದರ ಕಡಿತಕ್ಕೆ ಮುಂದಾದ ಒಕ್ಕೂಟಗಳು

ಮೇ ತಿಂಗಳಲ್ಲಿ ಹೋದ ವರ್ಷ ಸುಮಾರು 78 ಲಕ್ಷ ಲೀಟರ್ ಹಾಲನ್ನು ಒಕ್ಕೂಟಗಳಿಗೆ ರೈತರು ಪೂರೈಸುತ್ತಿದ್ದರು. ಆದರೆ ಈಗ ಸುಮಾರು 89 ಲಕ್ಷ ಲೀಟರ್‌ಗೆ ಮುಟ್ಟಿದೆ. ಖಾಸಗಿಯವರು ಹಾಲು ಖರೀದಿ ಕಡಿಮೆ ಮಾಡಿರುವುದು, ಮಳೆಯಾಗಿ ಹಸು ಎಮ್ಮೆಗಳಿಗೆ ಯಥೇಚ್ಛವಾಗಿ ಮೇವು ಸಿಕ್ಕುತ್ತಿರುವುದು ಹಾಲಿನ ಪ್ರಮಾಣ ಹೆಚ್ಚಳಕ್ಕೆ ಕಾರಣ ಎಂದು ಬಿ.ಸಿ. ಸತೀಶ್ ಈಟಿವಿ ಭಾರತಕ್ಕೆ ದೂರವಾಣಿ ಮುಖಾಂತರ ತಿಳಿಸಿದರು.

ಹಾಲಿನ ಪ್ಯಾಕೆಟ್ ಮಾರಾಟ, ಬೆಣ್ಣೆ, ತುಪ್ಪ, ಎಲ್ಲಾ ಹಾಲಿನ ಉತ್ಪನ್ನಗಳ ತಯಾರಿಕೆ ಸೇರಿ ಸುಮಾರು 45 ಲಕ್ಷ ಲೀಟರ್ ಬಳಕೆಯಾಗುತ್ತಿದೆ. ಉಳಿದ ಸುಮಾರು 35 ಲಕ್ಷ ಲೀಟರ್‌ ಹಾಲನ್ನು ಪ್ರತಿನಿತ್ಯ ಪುಡಿಯಾಗಿ ಪರಿವರ್ತಿಸಲಾಗುತ್ತಿದೆ ಎಂದು ಹೇಳಿದರು.

ಪುಡಿ ಪರಿವರ್ತನೆ ಸಾಮರ್ಥ್ಯದ ಮಿತಿಯೂ ಮೀರಿದೆ. ಹಾಲಿನ ಪೂರೈಕೆ ಇದೇ ರೀತಿ ಮುಂದುವರಿದರೆ, ಪುಡಿಯಾಗಿ ಪರಿವರ್ತಿಸುವುದೂ ಕಷ್ಟ. ಮುಂದಿನ ತಿಂಗಳ ಕೊನೆಯ ವೇಳೆಗೆ 1 ಕೋಟಿ ಲೀಟರ್ ಹಾಲು ಪೂರೈಕೆ ಆಗುವ ನಿರೀಕ್ಷೆ ಕೂಡ ಇದ್ದು, ಪರಿಸ್ಥಿತಿ ಬಿಗಡಾಯಿಸಲಿದೆ ಎಂದರು.

ಈಗ ಹಾಲಿನ ಪುಡಿ ತಯಾರಿಕೆ ಹೆಚ್ಚಾಗಿರುವ ಕಾರಣ ಸದ್ಯ ಸುಮಾರು 19 ಸಾವಿರ ಟನ್ ಹಾಲಿನ ಪುಡಿ ದಾಸ್ತಾನಿದೆ. 12 ಸಾವಿರ ಟನ್ ಬೆಣ್ಣೆ ದಾಸ್ತಾನಿದೆ. ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದ ಕಾರಣ ದರವೂ ಕುಸಿತವಾಗಿದೆ. ಯಥೇಚ್ಛವಾಗಿ ಸಂಗ್ರಹ ಆಗುತ್ತಿರುವ ಸುಮಾರು 800 ಕೋಟಿಯ ಹಾಲು, ಹಾಲಿನ ಪುಡಿ ಹೊರ ರಾಜ್ಯದ ಪೂರೈಕೆ ಕೂಡ ಸಂಪೂರ್ಣ ನಿಂತಿರುವುದರಿಂದ ಏನು ಮಾಡಬೇಕು ಎಂಬ ಚಿಂತೆ ಕಾಡುತ್ತಿದೆ ಎಂದು ಹೇಳಿದರು.

ಶಾಲಾ ಮಕ್ಕಳಿಗಾಗಿ ಪುಡಿ ಖರೀದಿಗೆ ಈಟಿವಿ ಭಾರತದ ಮುಖಾಂತರ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್ ಸರ್ಕಾರಕ್ಕೆ ಮನವಿ:

1 ರಿಂದ 10ನೇ ತರಗತಿಯ ಸರ್ಕಾರಿ ಶಾಲೆ ಮತ್ತು ಅನುದಾನಿತ ಶಾಲೆ ಮಕ್ಕಳಿಗೆ ಹಾಲು ನೀಡುವ ಯೋಜನೆ ಸದ್ಯಕ್ಕೆ ಸ್ಥಗಿತಗೊಂಡಿದೆ. ಸರ್ಕಾರ ಕೆಎಂಎಫ್‌ನಿಂದ ಹಾಲಿನ ಪುಡಿ ಖರೀದಿ ಮಾಡಿ ಮಕ್ಕಳ ಮನೆಗೇ ಹಾಲಿನ ಪುಡಿ ವಿತರಿಸಬೇಕು ಎಂಬ ಮನವಿಯನ್ನು ಕೆಎಂಎಫ್ ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿದೆ ಎಂದು ತಿಳಿಸಿದರು.

ಕೋವಿಡ್‌ನಿಂದ ಶಾಲೆಗಳಿಗೆ ರಜೆ ನೀಡಿದ ಬಳಿಕ ಹಾಲಿನ ಯೋಜನೆ ಸಂಪೂರ್ಣ ನಿಂತಿದೆ. ಮನೆಯಲ್ಲಿರುವ ಮಕ್ಕಳಿಗೆ ಅರ್ಧ ಕೆ.ಜಿ ಹಾಲಿನ ಪುಡಿ ನೀಡುವ ಮೂಲಕ ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಿಸಲು ಸಾಧ್ಯವಿದೆ ಎಂದು ಹೇಳಿದರು.

ರಾಜ್ಯದಲ್ಲಿರುವ 64 ಲಕ್ಷ ಮಕ್ಕಳಿಗೆ ಅರ್ಧ ಕೆಜಿ ಯಂತೆ ಹಾಲಿನ ಪುಡಿ ನೀಡಲು 192.32 ಕೋಟಿ ಬೇಕಾಗಲಿದೆ. ಹೀಗೆ ಖರೀದಿಸುವ ಮೂಲಕ ಎರಡು ತಿಂಗಳ ಮಟ್ಟಿಗಾದರೂ ಹಾಲು ಉತ್ಪಾದಕರ ನೆರವಿಗೆ ಸರ್ಕಾರ ಬರಬೇಕು ಮತ್ತು 25 ಲಕ್ಷ ಹೈನುಗಾರರಿಗೆ ನೆರವಾಗಬೇಕು ಎಂದು ನಮ್ಮ ವಾಹಿನಿಯ ಮೂಲಕ ಮನವಿ ಮಾಡಿದರು.

ABOUT THE AUTHOR

...view details