ಬೆಂಗಳೂರು:ಕರ್ನಾಟಕದಲ್ಲಿ ಉಂಟಾಗಿರುವ ಧಾರ್ಮಿಕ ವಿಭಜನೆಯನ್ನು ಪರಿಹರಿಸಿ ಎಂದು ಬಯೋಕಾನ್ ಮುಖ್ಯಸ್ಥೆ ಕಿರಣ್ ಮಂಜುದಾರ್ ಶಾ ಟ್ವೀಟ್ ಮಾಡುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದ್ದಾರೆ. ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಕೋಮುವಾದ ಬೆಳೆದರೆ ದೇಶದ ಜಾಗತಿಕ ನಾಯಕತ್ವ ನಾಶವಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ ಯಾವಾಗಲೂ ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡುತ್ತದೆ. ಇದರಲ್ಲಿ ಕೋಮುವಾದಕ್ಕೆ ಅನುಮತಿ ನೀಡಬಾರದು. ಐಟಿ-ಬಿಟಿಯಲ್ಲಿ ಕೋಮವಾದ ಪ್ರವೇಶಿಸಿದರೆ ಜಾಗತಿಕ ನಾಯಕತ್ವ ನಾಶವಾಗುತ್ತದೆ. ದಯವಿಟ್ಟು ಈ ಬೆಳವಣಿಗೆ ಕುರಿತು ಗಮನ ಹರಿಸಿ, ಆದಷ್ಟು ಬೇಗ ಈ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.
ಕರ್ನಾಟಕದಲ್ಲಿ ಹಿಜಾಬ್, ಸಮವಸ್ತ್ರ ವಿವಾದದ ಬೆನ್ನಲ್ಲೇ ಇದೀಗ ಹಲಾಲ್ ಪ್ರಕರಣ ಉದ್ಭವವಾಗಿದ್ದು, ರಾಜ್ಯದಲ್ಲಿ ನಡೆಯುತ್ತಿರುವ ಹಿಂದೂ ದೇಗುಲಗಳ ಜಾತ್ರೆಗಳಲ್ಲಿ ಮುಸ್ಲಿಮರು ಅಂಗಡಿಗಳನ್ನಿಡಲು ಅವಕಾಶ ನಿರಾಕರಣೆ ಮಾಡಲಾಗ್ತಿದೆ. ಈ ಪ್ರಕರಣ ಈಗಾಗಲೇ ರಾಜಕೀಯ ಸ್ವರೂಪ ಪಡೆದುಕೊಂಡಿದೆ.
ಇದನ್ನೂ ಓದಿ:'ಮದ್ಯಪಾನ ಮಾಡುವವರು ಮಹಾಪಾಪಿಗಳು, ಅವರು ಭಾರತೀಯರಲ್ಲ': ಬಿಹಾರ ಸಿಎಂ
ಬಯೋಕಾನ್ ಮುಖ್ಯಸ್ಥೆ ಕಿರಣ್ ಮಂಜುದಾರ್ ಶಾ ಟ್ವೀಟ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಈ ಸಮಸ್ಯೆ ಬಗ್ಗೆ ಚರ್ಚ ಮಾಡಿ ಬಗೆಹರಿಸಲು ಸಾಧ್ಯವಿದೆ. ಕರ್ನಾಟಕ ಶಾಂತಿ, ಪ್ರಗತಿಗೆ ಹೆಸರುವಾಸಿ. ಇಲ್ಲಿ ಎಲ್ಲರೂ ಸಂಯಮದಿಂದ ಜೀವನ ನಡೆಸಬೇಕು. ರಾಜ್ಯದಲ್ಲಿನ ಕೆಲವೊಂದು ವಿಷಯಗಳ ಬಗ್ಗೆ ಚರ್ಚೆ ನಡೆಸುವ ಅಗತ್ಯವಿದೆ ಎಂದಿದ್ದಾರೆ.