ದೇವನಹಳ್ಳಿ(ಬೆಂಗಳೂರು):ಕೋವಿಡ್ ನಡುವೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಗಮನಾರ್ಹ ಸಾಧನೆ ಮಾಡಿದೆ. 2022ರಲ್ಲಿ ಪ್ರಯಾಣಿಕರ ಪ್ರಯಾಣದಲ್ಲಿ ಶೇ.49.2ರಷ್ಟು ಪ್ರಗತಿ ಹಾಗೂ ಸರಕು ಸಾಗಣೆಯಲ್ಲಿ ಶೇ. 26 ರಷ್ಟು ಪ್ರಗತಿ ಸಾಧಿಸಿದೆ. ಸ್ಥಳೀಯ ಸಂಪರ್ಕವನ್ನ 54 ತಾಣಗಳಿಂದ 76ಕ್ಕೆ ಸಂಪರ್ಕ ಸಾಧಿಸಿದೆ.
ಸರಕು ಸಾಗಣೆಯಲ್ಲಿ ಸಾರ್ವಕಾಲಿಕ ದಾಖಲೆ:ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಈ ಬಾರಿ ಅತ್ಯಂತ ಹೆಚ್ಚು ಸರಕು ಸಾಗಣೆ ಮಾಡಿದೆ. 2022 ರ ಹಣಕಾಸು ವರ್ಷದಲ್ಲಿ ಅಂತರಾಷ್ಟ್ರೀಯ ಮತ್ತು ಸ್ಥಳೀಯ ಸರಕು ಸಾಗಣೆಯಲ್ಲಿ ಒಟ್ಟು 411,513 ಮೆಟ್ರಿಕ್ ಟನ್ನುಗಳಷ್ಟು ಸರಕು ಸಾಗಣೆ ಮಾಡಿದೆ. 2021ರ ಹಣಕಾಸು ವರ್ಷದಲ್ಲಿ 326,643 ಮೆಟ್ರಿಕ್ ಟನ್ ಸರಕು ಸಾಗಣೆ ಮಾಡಿತ್ತು. ಕಳೆದ ಬಾರಿಗಿಂತ ಶೇ.26ರಷ್ಟು ಹೆಚ್ಚು ಸರಕು ಸಾಗಣೆ ಮಾಡಿ ಸಾಧನೆ ಮಾಡಿದೆ.
ಪ್ರಯಾಣಿಕರ ಪ್ರಮಾಣ ಹೆಚ್ಚಳ:ಪ್ರಯಾಣಿಕರ ಪ್ರಮಾಣ ಮತ್ತೆ ಚೇತರಿಸಿಕೊಳ್ಳುತ್ತಿದೆ. 2021ರ ಹಣಕಾಸು ವರ್ಷಕ್ಕೆ ಹೋಲಿಸಿದರೆ 2022ರ ಹಣಕಾಸು ವರ್ಷದಲ್ಲಿ ಸ್ಥಳೀಯ ಪ್ರಯಾಣದಲ್ಲಿ ಶೇ.45ಕ್ಕಿಂತ ಹೆಚ್ಚು ಹಾಗೂ ಅಂತಾರಾಷ್ಟ್ರೀಯ ಪ್ರಯಾಣದಲ್ಲಿ ಶೇ.136ರಷ್ಟು ಪ್ರಗತಿ ಕಂಡಿದೆ. ಬೆಂಗಳೂರು ವಿಮಾನ ನಿಲ್ದಾಣ 2022ರ ಹಣಕಾಸು ವರ್ಷದಲ್ಲಿ 16.28 ಮಿಲಿಯನ್ ಪ್ರಯಾಣಿಕರನ್ನು ಸ್ವಾಗತಿಸಿದೆ. 2021ರ ಹಣಕಾಸು ವರ್ಷದಲ್ಲಿ 10.91. ಮಿಲಿಯನ್ ಪ್ರಯಾಣಿಕರನ್ನು ಸ್ವಾಗತಿಸಿತ್ತು. ಟ್ರಾಫಿಕ್‌ನಲ್ಲಿ 2020ರ ಮಟ್ಟದಲ್ಲಿ ಶೇ.54ರಷ್ಟು ಪುನಃಶ್ಚೇತನ ಮತ್ತು ಸ್ಥಳೀಯ ಪುನಶ್ಚೇತನದಲ್ಲಿ ಶೇ.55ರಷ್ಟು ಪುನಃಶ್ಚೇತನವಾಗಿದ್ದರೆ ಅಂತಾರಾಷ್ಟ್ರೀಯ ಪ್ರಯಾಣಿಕರ ಪ್ರಯಾಣದ ಪುನಃಶ್ಚೇತನ ಶೇ.24ರಷ್ಟು ಕಂಡಿದೆ.