ಬೆಂಗಳೂರು :ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (ಕೆಐಎಡಿಬಿ)ಯ ವಿಶೇಷ ಭೂಸ್ವಾಧೀನಾಧಿಕಾರಿ ತೇಜಸ್ ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಬಿದ್ದಿದ್ದಾರೆ. ಕೆಎಎಸ್ ಅಧಿಕಾರಿ ತೇಜಸ್ ಅವರನ್ನು ಎಸಿಬಿ ತಂಡವಶಕ್ಕೆ ಪಡೆದಿದೆ.
ಕೆಐಎಡಿಬಿಯಿಂದ ಸ್ವಾಧೀನಕ್ಕೆ ಒಳಪಟ್ಟಿದ್ದ ಜಮೀನಿನ ಭೂ ಪರಿಹಾರ ಬಿಡುಗಡೆ ಮಾಡಲು ಚಿಂತಾಮಣಿಯ ನಿವಾಸಿಯೊಬ್ಬರಿಗೆ ₹13 ಲಕ್ಷ ನೀಡುವಂತೆ ತೇಜಸ್ ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಎಸಿಬಿ ಬಲೆಗೆ ಬಿದ್ದ ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ಈ ಸಂಬಂಧ ಈಗಾಗಲೇ ₹10.5 ಲಕ್ಷ ಲಂಚ ಪಡೆದಿದ್ದರು. ಈಗ ಮತ್ತೆ ₹2 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಹೀಗಾಗಿ, ಮಂಗಳವಾರ ₹2 ಲಕ್ಷ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ತೇಜಸ್ ಅವರನ್ನು ವಶಕ್ಕೆ ಪಡೆದಿದ್ದಾರೆ.
ಭೂ ಪರಿಹಾರ ಬಿಡುಗಡೆ ಮಾಡಲು ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಚಿಂತಾಮಣಿಯ ರೈತರು ಈ ಮೊದಲು ಎಸಿಬಿಗೆ ದೂರು ನೀಡಿದ್ದರು. ಈ ಹಿನ್ನೆಲೆ ಇಂದು ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ರೂಪಿಸಿದ್ದರು.
ಲಂಚ ಪಡೆಯುವಾಗ ತೇಜಸ್ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದ್ದಾರೆ. ಈ ಹಿಂದೆ ಕೆ ಆರ್ ಪುರಂನ ತಹಶೀಲ್ಡಾರ್ ಆಗಿದ್ದ ವೇಳೆಯೂ ತೇಜಸ್ ವಿರುದ್ಧ ಸಾಕಷ್ಟು ಭ್ರಷ್ಟಾಚಾರ ಆರೋಪ ಕೇಳಿ ಬಂದಿತ್ತು ಎನ್ನಲಾಗಿದೆ.