ಬೆಂಗಳೂರು: ಯೋಗ ಮತ್ತು ಮಲ್ಲಕಂಬ ಕೂಡ ಖೇಲೋ ಇಂಡಿಯಾ ಕ್ರೀಡೆಗೆ ಸೇರಿಸಲಾಗಿದ್ದು, ಗ್ರಾಮೀಣ ಆಟವನ್ನೂ ಕ್ರೀಡೆಗೆ ಸೇರಿಸಿ ಈ ಬಾರಿ ವಿಶ್ವದ ಗಮನ ಸೆಳೆದಿದ್ದೇವೆ. ಕ್ರೀಡಾ ಕೂಟ ಅಯೋಜನೆಗೆ ಜೈನ್ ವಿವಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಕಾರ್ಯಕ್ರಮ ಯಶಸ್ವಿಯಾಗಲು ಸಂಪೂರ್ಣವಾಗಿ ವಿವಿ ಶ್ರಮ ವಹಿಸಿದೆ. ಇದರ ಜೊತೆಯಲ್ಲಿ ಅತಿ ಹೆಚ್ಚು ಮೆಡಲ್ ಜೈನ್ ವಿವಿ ಪಡೆದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಕಳೆದ 9 ದಿನಗಳಿಂದ ಖೇಲೋ ಇಂಡಿಯಾ ಕ್ರೀಡಾಕೂಟ ನಗರದಲ್ಲಿ ನಡೆಯಿತು. ಕ್ರೀಡಾಕೂಟದ ಸಮಾರೋಪ ಸಮಾರಂಭ ಕಂಠೀರವ ಕ್ರೀಡಾಂಗಣದಲ್ಲಿ ಜರುಗಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಅನುರಾಗ್ ಸಿಂಗ್ ಠಾಕೂರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್ ಅಶ್ವತ್ಥ್ ನಾರಾಯಣ್, ಗೃಹ ಸಚಿವ ಆರಗ ಜ್ಞಾನೇಂದ್ರ, ನಟ ಸುದೀಪ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
ಸಮಾರೋಪ ಸಮಾರಂಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಮುಖ್ಯವಾಗಿ 500 ವಿದ್ಯಾರ್ಥಿಗಳಿಂದ ʼಯೋಗ' ಪ್ರದರ್ಶನ ಮತ್ತು ʼಖೇಲೋ ಇಂಡಿಯಾ ಯೂನಿರ್ವಸಿಟಿ ಗೇಮ್ಸ್-2021ʼರ 500 ಸ್ಪರ್ಧಾಳುಗಳಿಂದ ʼಆಜಾದಿ ಕಾ ಅಮೃತ್ ಮಹೋತ್ಸವʼದ ನೃತ್ಯ ಮತ್ತು ಸಂಗೀತದ ಜೊತೆ ಬಹುವರ್ಣಗಳ ಲೇಸರ್ ಬೆಳಕಿನ ಪ್ರದರ್ಶನ ನಡೆಯಿತು. ಈ ಸಂದರ್ಭದಲ್ಲಿ ಖೇಲೋ ಇಂಡಿಯಾ 2021 ಪೋಸ್ಟಲ್ ಕವರ್ ಬಿಡುಗಡೆ ಮಾಡಲಾಯಿತು.
ಒಲಿಂಪಿಕ್ಗೆ ಹೋಗಲು ಭಾರತೀಯ ಕ್ರೀಡಾಪಟುಗಳ ಕೊರತೆ ಇತ್ತು:ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅಮಿತ್ ಶಾ ಎರಡನೇಯ ಖೇಲೋ ಇಂಡಿಯಾ ಕಾರ್ಯಕ್ರಮದಲ್ಲಿ ಮೂರು ಸಾವಿರ ಕ್ರೀಡಾಪಟುಗಳು ಭಾಗಿಯಾಗಿದ್ದಾರೆ. ಯೂನಿವರ್ಸಿಟಿ ಕ್ರೀಡಾಕೂಟಕ್ಕೆ ಇಷ್ಟು ಜನ ಕ್ರೀಡಾಪಟುಗಳು ಆಗಮಿಸಿರುವುದು ಸಂತಸ ತಂದಿದೆ. ಒಲಿಂಪಿಕ್ಗೆ ಹೋಗಲು ಭಾರತೀಯ ಕ್ರೀಡಾಪಟುಗಳ ಕೊರತೆ ಇತ್ತು. ಕ್ರಿಕೆಟ್ ಬಿಟ್ಟು ಎಲ್ಲಾ ಕ್ರೀಡೆಗಳಿಂದ ಹಿಂದೆ ಉಳಿದಿದ್ದೆವು. ಈಗ ಒಲಿಂಪಿಕ್ ಸೇರಿದಂತೆ ಎಲ್ಲಾ ಕ್ರೀಡೆಗಳಲ್ಲಿ ಭಾರತೀಯ ಕ್ರೀಡಾಪಟುಗಳು ಭಾಗಿಯಾಗುವ ಅವಕಾಶ ಒದಗಿ ಬಂದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಮೋದಿಯಿಂದ ಕ್ರೀಡಾಕೂಟದ ಅಯೋಜನೆಗೆ ಸಾಕಷ್ಟು ಚರ್ಚೆ:ಮೋದಿ ಕ್ರೀಡಾಕೂಟಕ್ಕಾಗಿ ಸಾಕಷ್ಟು ಚರ್ಚೆ ಮಾಡಿದ್ದರು. ಎಲ್ಲಾ ಕ್ರೀಡಾ ಸಂಘಗಳ ಜೊತೆ ಕ್ರೀಡಾ ಸಚಿವರು ಮಾತುಕತೆ ನಡೆಸಿದ್ದರು. ಈಗ ಕ್ರೀಡಾಪಟುಗಳು ಎಲ್ಲಾ ಕ್ರೀಡೆಗಳಲ್ಲಿ ಭಾಗಿಯಾಗುವ ಮೂಲಕ ಭಾರತದ ಹೆಸರನ್ನ ಉತ್ತುಂಗಕ್ಕೆ ಏರಿಸಿದ್ದಾರೆ. ವಿದ್ಯಾರ್ಥಿಗಳು ಕ್ರೀಡೆಯ ಮೂಲಕ ಸಫಲರಾಗಿದ್ದಾರೆ. ಜೀವನದ ಯಾವುದೇ ಕ್ಷೇತ್ರದಲ್ಲಿ ಇರಿ, ಆದರೆ ಕ್ರೀಡೆಯಲ್ಲಿ ಸಾಧನೆ ಮಾಡಿ ಎಂದು ಕರೆ ನೀಡಿದರು.
ಉತ್ತಮ ಕ್ರೀಡೆ ನೋಡಿ ಜೀವನದಲ್ಲಿ ಆನಂದ ದೊರೆಯುತ್ತದೆ:ಉತ್ತಮ ಕ್ರೀಡೆ ನೋಡಿ ಜೀವನದಲ್ಲಿ ಆನಂದ ದೊರೆಯುತ್ತದೆ. ಈಗ ಒಲಿಂಪಿಕ್ ಕ್ರೀಡೆಗಳಲ್ಲಿ ಭಾಗಿಯಾಗಿ ಗೆಲುವು ಪಡೆಯುವ ಕ್ಷಣ ಎದುರಾಗಿದೆ. 75ನೇ ವರ್ಷದ ಆಜಾದ್ ಕಿ ಅಮೃತ ಮಹೋತ್ಸವ ದಿನಮಾನದಲ್ಲಿ ಒಲಿಂಪಿಕ್ ಕ್ರೀಡೆಯಲ್ಲಿ ಭಾರತ 5ನೇ ಸ್ಥಾನದ ಒಳಗೆ ಬರಬೇಕು ಎನ್ನುವ ಆಶಯ ಇದೆ. ಈ ಕ್ರೀಡಾಕೂಟದಲ್ಲಿ ಒಟ್ಟು 208 ವಿವಿಗಳ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಒಡಿಶಾದಲ್ಲಿ ಮೊದಲ ಬಾರಿಗೆ ಖೇಲೋ ಇಂಡಿಯಾ ನಡೆದಾಗ 118 ವಿವಿಗಳು ಮಾತ್ರ ಭಾಗಿಯಾಗಿದ್ದವು ಎಂದರು.
ಪ್ರಧಾನಿ ಮೋದಿ ಪ್ರೇರಣೆ:ಪ್ರಧಾನಿ ಮೋದಿ ಪ್ರೇರಣೆಯ ಮೇಲೆ ಕ್ರೀಡೆ ಆಯೋಜಿಸಲಾಗಿದೆ. 80 ಕ್ರೀಡೆಗಳನ್ನ ಆಡಲು ಬೇರೆ ದೇಶಗಳೊಂದಿಗೆ ಟೈಅಪ್ ಮಾಡಿಕೊಳ್ಳಲು ಒಪ್ಪಿಗೆ ಸೂಚಿಸಲಾಗಿದೆ. ವಿಶ್ವದಲ್ಲೇ ಅತಿ ಹೆಚ್ಚು ಯುವಕರನ್ನು ಹೊಂದಿರುವ ದೇಶ ನಮ್ಮದು. ಈ ರೀತಿಯ ಕ್ರೀಡೆಗಳನ್ನು ಆಡುವ ಮೂಲಕ ಒಲಿಂಪಿಕ್ ಕ್ರೀಡೆಗಳಲ್ಲಿ ಭಾಗವಹಿಸಿ ಗೆಲ್ಲಲು ಸಾಧ್ಯ ಎಂದರು.
ಸೋಲು ಎನ್ನುವುದನ್ನು ತಳ್ಳಿ ಹಾಕಬೇಕು:ಸೋಲು ಎನ್ನುವುದನ್ನು ತಳ್ಳಿ ಹಾಕಿ ಗೆಲುವಿನತ್ತ ಮನಸ್ಸು ಮಾಡಬೇಕು. ಕರ್ನಾಟಕ ಸರ್ಕಾರ 75 ಜನ ಕ್ರೀಡಾಪಟುಗಳನ್ನು ದತ್ತು ತೆಗೆದುಕೊಂಡಿದೆ. ಎಲ್ಲ ರಾಜ್ಯ ಸರ್ಕಾರಗಳು ಕೂಡ ಕ್ರೀಡಾಪಟುಗಳನ್ನು ದತ್ತು ತೆಗೆದುಕೊಂಡು ಕ್ರೀಡೆಗೆ ಪ್ರೋತ್ಸಾಹ ನೀಡಬೇಕು. ಭಾರತ ಮುಂದೆ ಒಲಿಂಪಿಕ್ನಲ್ಲಿ ದೊಡ್ಡ ಸಾಧನೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.