ವಿಶ್ವದಾದ್ಯಂತ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಹವಾ ಜೋರಾಗಿದ್ದು, ಬಿಡುಗಡೆ ಆದ ಎರಡನೇ ದಿನ ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ, ನಿರ್ಮಾಪಕ ವಿಜಯ್ ಕಿರಂಗದೂರ್ ಬಹುಕೋಟಿ ವೆಚ್ಚದ, ಕೆಜಿಎಫ್ ಚಾಪ್ಟರ್ 2 ಸಿನಿಮಾ ಅಂದುಕೊಂಡಂತೆ ಸಿನಿಮಾ ಪ್ರೇಕ್ಷಕರನ್ನ ರಂಜಿಸುವುದರ ಜೊತೆಗೆ ಬಾಕ್ಸ್ ಆಫೀಸ್ನಲ್ಲಿ ಎರಡನೇ ದಿನವೂ ದಾಖಲೆ ಬರೆದಿದೆ.
ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾವೊಂದು, ಎರಡನೇ ದಿನವೂ ವಿಶ್ವದಾದ್ಯಂತ ಬಾಕ್ಸ್ ಆಫೀಸ್ನಲ್ಲಿ ಕೊಳ್ಳೆ ಹೊಡೆಯುತ್ತಿದೆ. ಮೊದಲನೇ ದಿನ ವಿಶ್ವಾದಾದ್ಯಂತ 185 ಕೋಟಿ ರೂ. ಗಳಿಸುವ ಮೂಲಕ ಕೆಜಿಎಫ್ ಚಾಪ್ಟರ್ 2 ದಾಖಲೆ ಸೃಷ್ಟಿಸಿತ್ತು. ಕೆಜಿಎಫ್ ಚಾಪ್ಟರ್ 2 ಸಿನಿಮಾದ ನಿರ್ಮಾಣದ, ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಭಾರತದಲ್ಲಿ ಒಟ್ಟು 135 ಕೋಟಿ ಗಳಿಸಿರುವುದಾಗಿ ಅಧಿಕೃತವಾಗಿ ಪ್ರಕಟಿಸಿತ್ತು. ಇದೀಗ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಎರಡನೇ ದಿನವು ಬಾಕ್ಸ್ ಆಫೀಸ್ನಲ್ಲಿ ನಾಗಾಲೋಟ ಮುಂದುವರೆಸಿದೆ.
ಗಾಂಧಿನಗರದ ಸಿನಿಮಾ ಪಂಡಿತರು ಹೇಳುವ ಹಾಗೆ, ಎರಡನೇ ದಿನವು ಭಾರತದಲ್ಲಿ ಬರೋಬ್ಬರಿ 70 ಕೋಟಿ ರೂ. ಗಳಿಸಿರುವುದಾಗಿ ಅಂದಾಜಿಸಲಾಗಿದೆ. ಯಾಕೆಂದರೆ ಶುಕ್ರವಾರ ಕೂಡ ಸರ್ಕಾರಿ ರಜೆ ಇದ್ದ ಕಾರಣ ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನಗೊಂಡಿದೆ. ಈ ಲೆಕ್ಕಾಚಾರದ ಮೇಲೆ ಎರಡನೇ ದಿನಕ್ಕೆ ಕೆಜಿಎಫ್ ಚಾಪ್ಟರ್ 2 ಸಿನಿಮಾ 70 ಕೋಟಿ ಗಳಿಸುವ ಮೂಲಕ, ಎರಡನೇ ದಿನವು ದಾಖಲೆ ಬರೆದಿದೆ ಎಂದು ಹೇಳಲಾಗಿದೆ.