ಬೆಂಗಳೂರು:ಆಪರೇಷನ್ ಕಮಲದ ಪ್ರಮುಖ ರೂವಾರಿ ಹಾಗೂ ಮುಂದಾಳಾಗಿದ್ದ ಈಗಿನ ಉಪ ಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್ ಅವರು ತಾವೇ ಗಾಜಿನ ಮನೆಯಲ್ಲಿದ್ದು, ಬೇರೆಯವರ ಮನೆಗೆ ಕಲ್ಲು ತೂರುವುದನ್ನು ನಿಲ್ಲಿಸಬೇಕು ಎಂದು ಕಾಂಗ್ರೆಸ್ ವಕ್ತಾರ ಕೆಂಗಲ್ ಶ್ರೀಪಾದ ರೇಣು ತಿಳಿಸಿದ್ದಾರೆ.
ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಡಿ ಕೆ ಶಿವಕುಮಾರ್ ವಿರುದ್ಧ ಹೇಳಿಕೆ ನೀಡಿದ್ದ ಡಿಸಿಎಂ ಡಾ ಅಶ್ವಥ್ ನಾರಾಯಣ್ ಅವರಿಗೆ ಮಾಧ್ಯಮ ಪ್ರಕಟಣೆ ಮೂಲಕ ಶ್ರೀಪಾದ ರೇಣು ತಿರುಗೇಟು ನೀಡಿದ್ದಾರೆ. 17 ಜನ ಅನರ್ಹ ಶಾಸಕರನ್ನು ಮುಂಬೈ ಪಂಚತಾರಾ ಹೋಟೇಲ್ನಲ್ಲಿ ತಿಂಗಳುಗಟ್ಟಲೇ ಇಡಲು ಹಾಗೂ ಅವರ ಎಲ್ಲಾ ಅವಶ್ಯಕತೆಗಳನ್ನು ಪೂರೈಸಲು ಹಣ ಎಲ್ಲಿಂದ ಬಂತು? ಇದಕ್ಕೆ ಆದ ಖರ್ಚುಗಳ ಬಗ್ಗೆ ದಾಖಲೆಯನ್ನು ನೀಡಿ ಎಂದು ಆಗ್ರಹಿಸಿದ್ದಾರೆ.
ಅಶ್ವಥ್ ನಾರಾಯಣ್ ಅವರು ಕೇವಲ 8 ವರ್ಷಗಳ ಅವಧಿಯಲ್ಲಿ ತಮ್ಮ ಆಸ್ತಿಯಲ್ಲಿ ಇಷ್ಟು ಹೆಚ್ಚಳವಾಗಿರುವುದರ ಬಗ್ಗೆ ಸರಿಯಾದ ದಾಖಲೆಗಳನ್ನ ನೀಡಬೇಕು ಎಂದು ಆಗ್ರಹಿಸಿರುವ ಅವರು, ತಾವು ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ನಡೆದ ಕಡತಗಳಿಗೆ ಬೆಂಕಿ ಪ್ರಕರಣದಲ್ಲಿ ಪ್ರಮುಖ ಆರೋಪಿ ಎನ್ನುವುದರ ಬಗ್ಗೆ ನೆನಪಿಸಿಕೊಳ್ಳಬೇಕು ಎಂದಿದ್ದಾರೆ.