ಬೆಂಗಳೂರು:ವಿಭಿನ್ನ ಪ್ರಯತ್ನಗಳಿಂದ ಬಹುಬೇಗನೆ ವಿಶ್ವಮಟ್ಟದಲ್ಲಿ ಜನಪ್ರಿಯಗಳಿಸಿ ಹಲವು ಪ್ರಶಸ್ತಿಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎಎಲ್) ಚಿತ್ರಣ ಇನ್ನೆರಡು ವರ್ಷಗಳಲ್ಲಿ ಬದಲಾಗಲಿದೆ.
ಹೌದು, ದೇಶದಲ್ಲಿ ಹೆಚ್ಚು ಪ್ರಯಾಣಿಕರು ಆಗಮಿಸುವ 3ನೇ ವಿಮಾನ ನಿಲ್ದಾಣ ಎಂಬ ಖ್ಯಾತಿಗೂ ಪಾತ್ರವಾಗಿದೆ. 2022ರ ವೇಳೆಗೆ ಇಲ್ಲಿನ ಟರ್ಮಿನಲ್-2ರ ಚಿತ್ರಣವನ್ನೇ ಬದಲಿಸಿ ಪ್ರವಾಸಿ ತಾಣವೊಂದಕ್ಕೆ ಬಂದಿರುವ ಅನುಭವ ತೋರುವಂತೆ ಮಾರ್ಪಾಟು ಮಾಡಲಾಗುತ್ತದೆ. ಸಂಪೂರ್ಣವಾಗಿ ಪ್ರಕೃತಿ ಮಡಿಲಿನಲ್ಲಿ ಸುತ್ತಾಡುವ ಅನುಭವ ಸಿಗುತ್ತದೆ. ಜೊತೆಗೆ ಕೃತಕ ಜಲಪಾತವನ್ನೂ ನೋಡಬಹುದು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2 ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಈಗಾಗಲೇ 1ನೇ ಟರ್ಮಿನಲ್ ಪರಿಸರ ಕಾಳಜಿಯಿಂದ ಮನಗೆದ್ದಿದ್ದು, 2ನೇ ಟರ್ಮಿನಲ್ ಕೂಡ ಅದೇ ರೀತಿ ಬದಲಾಗಲಿದೆ. ನಿರ್ಮಾಣವಾಗುತ್ತಿರುವ 2ನೇ ಟರ್ಮಿನಲ್ ಉದ್ಯಾನಗಳಿಂದ ಕೂಡಿರಲಿದೆ. ಸೂರ್ಯನ ಕಿರಣಗಳು ನೇರವಾಗಿ 2ನೇ ಟರ್ಮಿನಲ್ಗೆ ತಾಗುವಂತೆ ವಿನ್ಯಾಸ ಮಾಡಲಾಗುತ್ತಿದೆ. ನಿಲ್ದಾಣದೊಳಗೆ ನಮ್ಮ ಪರಂಪರೆ, ಸಂಸ್ಕೃತಿ ಪರಿಚಯಿಸಲಾಗುತ್ತದೆ. ಈ ಎಲ್ಲವನ್ನೂ ಬಿಐಎಎಲ್ ಬಿಡುಗಡೆ ಮಾಡಿರುವ ಗ್ರಾಫಿಕಲ್ ವಿಡಿಯೋದಲ್ಲಿ ನೋಡಬಹುದು.
ಈಗಾಗಲೇ ಭರದಿಂದ 2ನೇ ರನ್ ಕಾಮಗಾರಿ ಸಾಗುತ್ತಿದ್ದು, ಪ್ರಾಯೋಗಿಕವಾಗಿ ವಿಮಾನಗಳ ಹಾರಾಟ ನಡೆಸಲಾಗಿದೆ. ಮೊದಲ ಟರ್ಮಿನಲ್ನಲ್ಲಿ ಅಳವಡಿಸಿದಂತೆ 2ನೇ ಟರ್ಮಿನಲ್ಲೂ ಸೋಲಾರ್ ಅಳವಡಿಸಲಾಗುತ್ತದೆ. ಪ್ರಯಾಣಿಕರು ಬೋರ್ಡಿಂಗ್ ಮತ್ತು ಡಿಬೋರ್ಡಿಂಗ್ ವೇಳೆ ವ್ಯಕ್ತಿಯನ್ನು ಗುರುತಿಸಲು ಫೇಸ್ ರೆಕಗ್ನೇಷನ್, ಫಿಂಗರ್ ಪ್ರಿಂಟ್ ಸೆನ್ಸಾರ್ ಸೌಲಭ್ಯ ಕಲ್ಪಿಸಲಾಗುತ್ತಿದೆ.
ಪ್ರಯಾಣಿಕರನ್ನು ಸೆಳೆಯಲು ಹೈ-ಫೈ ತಂತ್ರಜ್ಞಾನದ ಮೊರೆ ಹೋಗಿರುವ ಕೆಂಪೇಗೌಡ ವಿಮಾನ ನಿಲ್ದಾಣದ 2ನೇ ಟರ್ಮಿನಲ್ನಲ್ಲಿ ಇದೆಲ್ಲವನ್ನೂ ಕಾಣಲು ಇನ್ನೂ ಎರಡು ವರ್ಷ ಕಾಯಲೇಬೇಕು. ಅಲ್ಲಿಯವರೆಗೂ ಗ್ರಾಫಿಕ್ಸ್ ಮೂಲಕವೇ ನೋಡಬೇಕಿದೆ. ಅಲ್ಲದೆ, ನಿಲ್ದಾಣದ ಅಭಿವೃದ್ಧಿಗೆ ಮತ್ತಷ್ಟು ಯೋಜನೆಗಳನ್ನು ಅಧಿಕಾರಿಗಳು ಸಿದ್ಧಪಡಿಸುತ್ತಿದ್ದಾರೆ.