ಕರ್ನಾಟಕ

karnataka

ETV Bharat / city

ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಸಿಎಂ ನಿಯೋಗದಿಂದ ಕೇಂದ್ರ ಸಚಿವರ ಭೇಟಿ: ಸಮಿತಿ ರಚನೆಗೆ ಸಮ್ಮತಿ - ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧ

ಪಶ್ಚಿಮ ಘಟ್ಟದ ಹಳ್ಳಿಗಳ ಸರ್ವೇ ಕಾರ್ಯ ನಡೆಸಲು ಸಮಿತಿಯೊಂದನ್ನು ರಚಿಸಲು ಕೇಂದ್ರ ಸಚಿವರು ಸಮ್ಮತಿ ಸೂಚಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

CM Bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

By

Published : Jul 26, 2022, 7:45 AM IST

ಬೆಂಗಳೂರು: ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ನಿಯೋಗದಿಂದ ಕೇಂದ್ರ ಅರಣ್ಯ ಸಚಿವರ ಭೇಟಿ ಫಲಪ್ರದವಾಗಿದೆ. ಪಶ್ಚಿಮ ಘಟ್ಟದ ಹಳ್ಳಿಗಳ ಸರ್ವೇ ನಡೆಸಲು ಸಮಿತಿಯೊಂದನ್ನು ರಚಿಸಲು ಕೇಂದ್ರ ಸಚಿವರು ಸಮ್ಮತಿ ಸೂಚಿಸಿದ್ದಾರೆ. ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯದ ನಿಯೋಗ ಭೇಟಿ ಮಾಡಿ, ಕಸ್ತೂರಿ ರಂಗನ್ ವರದಿ ಜಾರಿಗೊಳಿಸದಂತೆ ಮನವಿ ಸಲ್ಲಿಸಿತು.

ಭೇಟಿಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ‌, ಕಸ್ತೂರಿ ರಂಗನ್ ವರದಿಯ ಬಗ್ಗೆ ರಾಜ್ಯದ ನಿಲುವನ್ನು ಸ್ಪಷ್ಟಪಡಿಸಲಾಗಿದೆ. ಮೊದಲಿದ್ದ ಗಾಡ್ಗೀಳ್‌ ಸಮಿತಿ ವರದಿಯನ್ನು ಎಲ್ಲ ರಾಜ್ಯಗಳೂ ವಿರೋಧಿಸಿದ್ದವು. ನಂತರ ಕಸ್ತೂರಿ ರಂಗನ್ ವರದಿ ಬಂತು. ಈ ವರದಿಯಲ್ಲಿ ಯಾವುದೇ ಭೂ ಸಮೀಕ್ಷೆ ಮಾಡದೇ ಕೇವಲ ಸ್ಯಾಟಲೈಟ್ ಸಮೀಕ್ಷೆ ನಡೆಸಲಾಗಿದ್ದು, ಹಸಿರು ಪ್ರದೇಶಗಳನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಲು ಹೊರಟಿದ್ದಾರೆ.


ಅಲ್ಲಿಯ ಜನಜೀವನ, ಪರಿಸರ ಒಟ್ಟಾಗಿದ್ದಾರೆ. ಕಾಫಿ, ಅಡಿಕೆ, ತೆಂಗು, ರಬ್ಬರ್ ತೋಟಗಳಿದ್ದು ಅಲ್ಲಿಯ ಜನ ಹಸಿರನ್ನು ಉಳಿಸಿ ಬೆಳೆಸಿದ್ದಾರೆ. ಆದ್ದರಿಂದ ಈ ಪ್ರದೇಶದ ಭೂಮಿ ಸಮೀಕ್ಷೆ ನಡೆಸದೆ ವಾಸ್ತವಾಂಶ ತಿಳಿಯುವುದಿಲ್ಲ ಎಂದು ವಿವರಿಸಲಾಗಿದೆ ಎಂದರು.

ಇದನ್ನೂ ಓದಿ:ಕಸ್ತೂರಿ ರಂಗನ್ ವರದಿ ಜಾರಿಗೆ ಮಲೆನಾಡು ಹಿತರಕ್ಷಣಾ ವೇದಿಕೆ ವಿರೋಧ

ಸಮಿತಿ ರಚಿಸಲು ನಿರ್ಧಾರ:ಈ ನಿಟ್ಟಿನಲ್ಲಿ ಪಶ್ಚಿಮ ಘಟ್ಟದ ಬಾಧಿತ ಹಳ್ಳಿಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಲು ಸಮಿತಿ ರಚಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ. ನಿವೃತ್ತ ಐಎಫ್‍ಎಸ್ ಅಧಿಕಾರಿ ಸಂಜಯ್ ಕುಮಾರ್ ಅವರ ನೇತೃತ್ವದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರು, ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾದ ಡೈರೆಕ್ಟರ್ ಜನರಲ್, ಭಾರತೀಯ ವಿಜ್ಞಾನ ಸಂಸ್ಥೆಯ ಮಾಜಿ ಪ್ರಾಧ್ಯಾಪಕ ಆರ್.ಸಿ.ಕುಮಾರ್, ಪರಿಸರ ಸೂಕ್ಷ್ಮ ವಲಯದ ನಿರ್ದೇಶಕರ ಸಲಹೆಗಾರರು, ಸಂಚಾಲಕರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ ಎಂದರು.

ಸಮಿತಿಗೆ ಒಂದು ವರ್ಷದ ಅವಧಿಯನ್ನು ನೀಡಲಾಗಿದೆ. ಈ ಸಮಿತಿ ಪಶ್ಚಿಮ ಘಟ್ಟದ ಬಾಧಿತ ಜನರೊಂದಿಗೆ ಮಾತನಾಡಿ, ಅಲ್ಲಿ ಜನ ಬೆಳೆದಿರುವ ಬೆಳೆಗಳು, ಸಾಂಸ್ಕೃತಿಕ ಹಾಗೂ ನೈಸರ್ಗಿಕ ಭೂ ಪ್ರದೇಶದ ಕುರಿತು ಸಂಪೂರ್ಣ ಅಧ್ಯಯನ ಕೈಗೊಂಡು ವರದಿ ನೀಡಬೇಕು. ಅಲ್ಲಿಯವರೆಗೆ ಕಸ್ತೂರಿ ರಂಗನ್ ವರದಿ ಜಾರಿ ಸಂಬಂಧ ಅಧಿಸೂಚನೆಯನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗುವುದಿಲ್ಲ. ಪಶ್ಚಿಮ ಘಟ್ಟಗಳಿರುವ ಎಲ್ಲಾ ರಾಜ್ಯಗಳಿಗೆ ಅದನ್ನು ಪ್ರತಿಪಾದಿಸಿ, ಉಳಿಸುವ ಮತ್ತೊಂದು ಅವಕಾಶ ದೊರೆತಿದೆ. ರಾಜ್ಯ ಮಟ್ಟದಲ್ಲಿಯೂ ಕೂಡ ಸಮಿತಿಯ ವಿಚಾರಣಾ ಉಲ್ಲೇಖಗಳ ಆಧಾರದ ಮೇಲೆ ಉನ್ನತ ಮಟ್ಟದ ಸಮಿತಿಯನ್ನೂ ಸಹ ರಚಿಸಲಾಗುವುದು.

ರಾಜ್ಯದ ಜೈವಿಕ ವೈವಿಧ್ಯತೆ ನೀತಿಯ ಪ್ರಕಾರ, ವರದಿ ತಯಾರಿಸುವಾಗ ಸ್ಥಳೀಯ ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿಯ ಅಭಿಪ್ರಾಯ ಪಡೆದಿರುವುದಿಲ್ಲ. ಒಟ್ಟಾರೆ ಸ್ಥಳೀಯ ಜನರ ಅಭಿಪ್ರಾಯವನ್ನು ಪಡೆಯದೆಯೇ ಕಸ್ತೂರಿ ರಂಗನ್ ವರದಿಯನ್ನು ಸಿದ್ಧಪಡಿಸಲಾಗಿದೆ. ಅಲ್ಲಿನ ನೈಸರ್ಗಿಕ ಹಾಗೂ ಸಾಂಸ್ಕೃತಿಕ ಭೂ ಪ್ರದೇಶವನ್ನು ಪ್ರತ್ಯೇಕವಾಗಿ ಗುರುತಿಸಲು ವರದಿಯ ವಿಚಾರಣಾ ಉಲ್ಲೇಖಗಳಲ್ಲಿದ್ದರೂ, ಅದನ್ನು ಪ್ರತ್ಯೇಕಿಸಿಲ್ಲ ಎಂದು ಸಿಎಂ ಹೇಳಿದರು.

ಕಸ್ತೂರಿ ರಂಗನ್ ವರದಿ ಅವೈಜ್ಞಾನಿಕ:ಈ ಸಮಿತಿ ರಚನೆಯಾದ ಸಂದರ್ಭದಲ್ಲಿ ವಾಸ್ತವಾಂಶಗಳನ್ನು ಸಲ್ಲಿಸುವುದರ ಜೊತೆಗೆ ಎಲ್ಲಾ ಗ್ರಾಮ ಪಂಚಾಯತಿಗಳ ಮನದಾಳದ ಆಸೆಯನ್ನು ಮನವರಿಕೆ ಮಾಡಿಕೊಡಲಾಗುವುದು. ಪ್ರತಿ ಗ್ರಾಮವನ್ನು ಒಂದು ಘಟಕವಾಗಿ ಪರಿಗಣಿಸಿ ಅವರ ಅಹವಾಲುಗಳನ್ನು ಕೇಳಬೇಕೆಂದು ಮನವಿ ಮಾಡುತ್ತೇವೆ.

ಕಸ್ತೂರಿ ರಂಗನ್ ವರದಿ ಬಹಳ ಅವೈಜ್ಞಾನಿಕವಾಗಿದೆ. ವೈಜ್ಞಾನಿಕವಾಗಿ ಅದನ್ನು ರೂಪಿಸುವ ಸಲುವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಉನ್ನತ ಮಟ್ಟದ ಸಮಿತಿ ರಚನೆಯಾಗಲಿದೆ. ಜನಜೀವನ ಹಾಗೂ ಪರಿಸರವನ್ನು ಉಳಿಸಲು ಅವಕಾಶವಿದೆ. ಇದರ ಜೊತೆಗೆ ವಿವಿಧ ರಾಜ್ಯಗಳ ಜೊತೆಗೂ ಚರ್ಚೆ ಮಾಡಿ ಸಾಮಾನ್ಯ ಕಾರಣಗಳನ್ನು ಚರ್ಚಿಸಲಾಗುವುದು. ಕೇಂದ್ರ ಸಚಿವ ಭೂಪೇಂದರ್ ಯಾದವ್ ಅವರಿಗೆ ರಾಜ್ಯಕ್ಕೆ ಭೇಟಿ ನೀಡಿ ಈ ಭಾಗಗಳಲ್ಲಿ ಸುತ್ತಿ ಪರಿಶೀಲಿಸುವಂತೆ ಕೋರಲಾಗಿದೆ. ರಾಜ್ಯಕ್ಕೆ ಭೇಟಿ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಸಿಎಂ ಬೊಮ್ಮಾಯಿ ವಿವರಿಸಿದರು.

ರಾಜ್ಯ ನಿಯೋಗದಲ್ಲಿ ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ರಾಜ್ಯ ಖಾತೆಯ ಸಚಿವೆ ಶೋಭಾ ಕರಂದ್ಲಾಜೆ, ಗೃಹ ಸಚಿವ ಆರಗ ಜ್ಞಾನೇಂದ್ರ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಸಂಸದ ನಳಿನ್‌ ಕುಮಾರ್ ಕಟೀಲ್, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಂಸದ ಪ್ರತಾಪ್ ಸಿಂಹ, ಕೋಲಾರ ಸಂಸದ ಮುನಿಸ್ವಾಮಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ಸಾಗರ ಶಾಸಕ ಹರತಾಳು ಹಾಲಪ್ಪ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಇದ್ದರು.

ಇದನ್ನೂ ಓದಿ:ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧ: ಸರಣಿ ಬಂದ್​ಗೆ ಕರೆ

ABOUT THE AUTHOR

...view details