ಬೆಂಗಳೂರು:ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರ ವಿಚಾರದಲ್ಲಿ ಎದ್ದಿದ್ದ ಗೊಂದಲಕ್ಕೆ ಪಕ್ಷದ ಹೈಕಮಾಂಡ್ ತೆರೆ ಎಳೆದಿದೆ. ಹಾಲಿ ಅಧ್ಯಕ್ಷ ರಕ್ಷಾ ರಾಮಯ್ಯ ಹಾಗೂ ಅತಿ ಹೆಚ್ಚು ಮತ ಗಳಿಸಿ ಅನರ್ಹತೆಗೆ ಒಳಗಾಗಿದ್ದ ಮೊಹಮ್ಮದ್ ನಲ್ಪಾಡ್ ನಡುವೆ ಉಂಟಾದ ತಿಕ್ಕಾಟಕ್ಕೆ ಪಕ್ಷದ ಹೈಕಮಾಂಡ್ ಪರಿಹಾರ ಕಂಡುಕೊಂಡಿದೆ.
ಮುಂದಿನ ಒಂದು ವರ್ಷ ರಕ್ಷಾ ರಾಮಯ್ಯ ಹಾಗೂ ನಂತರದ ಎರಡು ವರ್ಷ ಅವಧಿಗೆ ಮೊಹಮ್ಮದ್ ನಲ್ಪಾಡ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದೆ. ಈ ಸಂಬಂಧ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. ಅಧಿಕೃತವಾಗಿ ಸೋಮವಾರ ಆದೇಶ ಹೊರಡಿಸಿದ್ದಾರೆ. ಅದರ ಪ್ರಕಾರ 2022ರ ಜನವರಿ 31ರವರೆಗೆ ರಕ್ಷಾ ರಾಮಯ್ಯ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಹಾಗೂ ನಂತರದ ಎರಡು ವರ್ಷದ ಅವಧಿಗೆ ನಲ್ಪಾಡ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಲಾಗಿದೆ.