ಬೆಂಗಳೂರು: ನಗರದಲ್ಲಿ ಇಂದು ಮಳೆರಾಯ ಆರ್ಭಟಿಸುವ ಸಾಧ್ಯತೆ ಇದೆ. ದಟ್ಟ ಮೋಡ ಕವಿದ ವಾತಾವರಣವಿದ್ದು, ಗುಡುಗಿನೊಂದಿಗೆ ಭಾರೀ ಮಳೆಯಾಗುವ ಸಂಭವವಿದೆ. ನಾಳೆಯೂ ಕೂಡಾ ಮಳೆಯಾಗುವ ಲಕ್ಷಣಗಳು ಹೆಚ್ಚಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಕುರಿತು ಮಾತನಾಡಿದ ಹವಾಮಾನ ತಜ್ಞ ಸಿ ಎಸ್ ಪಾಟೀಲ್, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಟ್ರಫ್ ಇರುವುದರಿಂದ ಉತ್ತರ ಒಳನಾಡಿನಲ್ಲಿ ಇಂದು, ನಾಳೆ ಮತ್ತು ಜು. 22 ರಂದು ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಜುಲೈ 23 ಮತ್ತು 24 ರಂದು ಉತ್ತರ ಒಳನಾಡಿನಲ್ಲಿ ವ್ಯಾಪಕ ಮಳೆಯಾಗುವ ಹೆಚ್ಚಿನ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದರು.
ಇಂದು ಬೀದರ್, ಕಲಬುರಗಿ, ಬೆಳಗಾವಿ, ಧಾರವಾಡ ಜಿಲ್ಲೆಗಳಲ್ಲಿ ಕೆಲವು ಕಡೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಒಳನಾಡಿನಲ್ಲಿ ಇಂದು ಮತ್ತು ನಾಳೆ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಮಳೆಯಾಗಬಹುದು. ಇಂದು ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ರಾಮನಗರ, ಬೆಂಗಳೂರು, ಚಾಮರಾಜನಗರ, ಚಿಕ್ಕಬಳ್ಳಾಪುರ ಹಾಗೂ ಚಿತ್ರದುರ್ಗದ ಕೆಲವು ಕಡೆ ಭಾರೀ ಮಳೆಯಾಗುವುದರಿಂದ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಜುಲೈ 23 ರಂದು ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿತ್ರದುರ್ಗ, ಹಾಸನ, ಬಳ್ಳಾರಿ, ಚಿಕ್ಕಮಂಗಳೂರು, ಕೆಲವು ಕಡೆ ಭಾರೀ ಮಳೆ ನಿರೀಕ್ಷಿಸಿರುವುದರಿಂದ ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ತಿಳಿಸಿದರು.
ಕಳೆದ 24 ಗಂಟೆಗಳಲ್ಲಿ ರಾಜ್ಯದ ಒಳನಾಡಿನಲ್ಲಿ ವ್ಯಾಪಕ ಮಳೆಯಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಮಳೆ ತೀವ್ರತೆ ಕಡಿಮೆಯಾಗಿದೆ. ಸಿದ್ಧಾಪುರದಲ್ಲಿ ಕೇವಲ 2 ಸೆಂ.ಮೀ ಮಳೆ ದಾಖಲಾಗಿದೆ. ಗದಗ ಜಿಲ್ಲೆಯ ನವಲಗುಂದದಲ್ಲಿ 6.4 ಸೆಂ.ಮೀ, ಬಾಗಲಕೋಟೆ ಜಿಲ್ಲೆಯ ಹುನಗುಂದದಲ್ಲಿ 6 ಸೆಂ.ಮೀ, ಎಗತಿ, ಚಿಕ್ಕಮಗಳೂರಿನಲ್ಲಿ 10 ಸೆಂ.ಮೀ, ಕೋಲಾರದಲ್ಲಿ 9.5 cm, ನಾಯಕನಹಳ್ಳಿಯಲ್ಲಿ 7 ಸೆಂ.ಮೀ ಮಳೆ ದಾಖಲಾಗಿದೆ ಎಂದು ಸಿ ಎಸ್ ಪಾಟೀಲ್ ಮಾಹಿತಿ ನೀಡಿದರು.