ಬೆಂಗಳೂರು:ನಗರದಲ್ಲಿ ಇಂದು ಕೂಡ ಮೋಡ ಕವಿದ ವಾತಾವರಣ ಇರಲಿದ್ದು, ಮಳೆಯಾಗುವ ಸಾಧ್ಯತೆ ಇದೆ. ಆದರೆ ಭಾರಿ ಮಳೆಯ ಮುನ್ಸೂಚನೆ ಇಲ್ಲ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂದಿನ ಐದು ದಿನಗಳ ಮಳೆ ಮುನ್ಸೂಚನೆ ಕುರಿತು ಮಾತನಾಡಿದ ಹವಾಮಾನ ತಜ್ಞ ಸದಾನಂದ ಅಡಿಗ, ರಾಜ್ಯದಲ್ಲಿ ಕರಾವಳಿ ಹಾಗೂ ಒಳನಾಡಿನಲ್ಲಿ ಒಂದೆರಡು ಕಡೆ ಮಾತ್ರ ಸೋಮವಾರ ಮಳೆಯಾಗಿದೆ. ಬೀದರ್ ಹಾಗೂ ದಾವಣಗೆರೆಯಲ್ಲಿ ಕನಿಷ್ಟ ಉಷ್ಣಾಂಶ, 18 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಐದು ದಿನಗಳ ಹವಾಮಾನ ಮುನ್ಸೂಚನೆ ಪ್ರಕಾರ ನ.30 ಮತ್ತು ಡಿ.1 ರಂದು ಎಲ್ಲ ಜಿಲ್ಲೆಗಳ ಕೆಲವು ಕಡೆ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಡಿ.2 ಹಾಗೂ 3 ರಂದು ಒಂದೆರಡು ಕಡೆ ಮಾತ್ರ ಮಳೆಯಾಗಲಿದೆ.
ಉತ್ತರ ಒಳನಾಡಿನಲ್ಲಿ ಡಿ. 3 ರವರೆಗೂ ಒಂದೆರಡು ಕಡೆ ಮಾತ್ರ ಮಳೆಯಾಗಲಿದೆ. ದಕ್ಷಿಣ ಒಳನಾಡಿನಲ್ಲಿ ಎಲ್ಲಾ ಐದು ದಿನ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಬೆಂಗಳೂರು ಜಿಲ್ಲೆಯಲ್ಲಿ ನ.30 ಹಾಗೂ ಡಿ.2 ರಂದು ಮಳೆಯಾಗುವ ಸಾಧ್ಯತೆ ಇದೆ. ಆದರೆ ರಾಜ್ಯಕ್ಕೆ ಮುಂದಿನ ಐದು ದಿನ ಯಾವುದೇ ಅಲರ್ಟ್ ಇಲ್ಲ ಎಂದರು.
ಶ್ರೀಲಂಕಾ ಕರಾವಳಿಯಲ್ಲಿ ಮೇಲ್ಮೈ ಸುಳಿಗಾಳಿ ಇದೆ. ಅರಬ್ಬೀ ಸಮುದ್ರದಲ್ಲಿ ಟ್ರಫ್ ಇದೆ. ಕರ್ನಾಟಕ ಕರಾವಳಿಯ ಸನಿಹದಲ್ಲಿದೆ. ಜೊತೆಗೆ ಎರಡು ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದೆ. ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ಇದು ರೂಪುಗೊಳ್ಳುವ ಸಾಧ್ಯತೆ ಇದ್ದು, ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಪ್ರಬಲ ವಾಯುಭಾರ ಕುಸಿತ ಆಗುವ ಸಾಧ್ಯತೆ ಇದೆ. ಇನ್ನೊಂದು ವಾಯುಭಾರ ಕುಸಿತ ಅರಬ್ಬೀ ಸಮುದ್ರದಲ್ಲಿ ರೂಪುಗೊಳ್ಳುವ ಸಾಧ್ಯತೆ ಇದ್ದು, ಮಹಾರಾಷ್ಟ್ರ ಕರಾವಳಿಯಿಂದಾಚೆಗೆ ಇರಲಿದೆ ಎಂದರು.
(ಇದನ್ನೂ ಓದಿ: ಒಟ್ಟಿಗೆ ಹಸೆಮಣೆ ಏರಿದ 6 ಸಹೋದರಿಯರು... 3 ಗ್ರಾಮಗಳಿಂದ ಬಂದ ಬೀಗರಿಗೆ ಇಡೀ ಊರೇ ಸ್ವಾಗತ!)