ಕರ್ನಾಟಕ

karnataka

ETV Bharat / city

ಕೋವಿಡ್ ಹೊಡೆತಕ್ಕೆ ನಲುಗಿದ ಪ್ರವಾಸೋದ್ಯಮ: ಬೊಕ್ಕಸಕ್ಕೆ ₹40 ಸಾವಿರ ಕೋಟಿ ಖೋತಾ!?

ಹೋಟೆಲ್ ಉದ್ಯಮ, ಸಿಬ್ಬಂದಿಗೆ ವೇತನ ಕೊಡಲು ಸಾಧ್ಯವಾಗದ ಸ್ಥಿತಿ ಎದುರಿಸುತ್ತಿದೆ. ವಿದ್ಯುತ್ ಬಿಲ್ ರಿಯಾಯಿತಿ ಕೇಳುವ ಹಂತ ತಲುಪಿದ್ದಾರೆ. ಪ್ರವಾಸಿ ಟ್ಯಾಕ್ಸಿ ಡ್ರೈವರ್​​ಗಳು ಕೆಲಸವಿಲ್ಲದೇ ಕುಳಿತಿದ್ದಾರೆ. ಪ್ರವಾಸಿಗರೇ ಬಾರದಿದ್ದಲ್ಲಿ ಅವರು ಜೀವನ ನಡೆಯುವುದು ಹೇಗೆ? ಲೋನ್ ಕಟ್ಟಲು ಸಾಧ್ಯವಾಗದೇ ಪರಿತಪಿಸುತ್ತಿದ್ದಾರೆ. ಪ್ರವಾಸಿ ಗೈಡ್​​ಗಳ ಪರಿಸ್ಥಿತಿ ಭಿನ್ನವಾಗಿಲ್ಲ.

karnataka-tourism-department-loss-
ಪ್ರವಾಸೋದ್ಯಮ ಕ್ಷೇತ್ರ

By

Published : Sep 25, 2020, 5:11 PM IST

ಕೋವಿಡ್-19 ಜಗತ್ತಿನ ಎಲ್ಲ ಕ್ಷೇತ್ರವನ್ನೂ ಆರ್ಥಿಕ ಸಂಕಷ್ಟಕ್ಕೆ ದೂಡಿದೆ. ಇದಕ್ಕೆ ಪ್ರವಾಸೋದ್ಯಮವೂ ಹೊರತಲ್ಲ. ರಾಜ್ಯದ ಬೊಕ್ಕಸಕ್ಕೆ ಭರಪೂರ ಆದಾಯ ತರುತ್ತಿದ್ದ ಪ್ರವಾಸೋದ್ಯಮ ನೆಲಕಚ್ಚಿದೆ. ಸರ್ಕಾರದ ಖಜಾನೆಗೆ ಬರಬೇಕಿದ್ದ ಸಾವಿರಾರು ಕೋಟಿ ರೂ.ಗಳಿಗೆ ಬ್ರೇಕ್ ಬಿದ್ದಿದೆ.

ರಾಜ್ಯದ ಪ್ರವಾಸೋದ್ಯಮ ಕ್ಷೇತ್ರ ಕೊರೊನಾದಿಂದ ಅಕ್ಷರಶಃ ನೆಲಕಚ್ಚಿದೆ. ಲಾಕ್​​ಡೌನ್ ಕಾರಣದಿಂದ ಮಾರ್ಚ್ 22ರಿಂದ ಪ್ರವಾಸೋದ್ಯಮ ಸಂಪೂರ್ಣ ಸ್ತಬ್ಧವಾಗಿದೆ. ಮೈಸೂರು, ವಿಜಯಪುರ, ಶಿವಮೊಗ್ಗ, ಕೊಡಗು ಸೇರಿ ರಾಜ್ಯದ ಪ್ರವಾಸಿ ತಾಣಗಳು ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿವೆ. ಪ್ರವಾಸಿ ತಾಣಗಳಲ್ಲಿ ಎಲ್ಲ ಚಟುವಟಿಕೆ ಸ್ಥಗಿತಗೊಂಡಿವೆ. ಇದೀಗ ಹಂತ ಹಂತವಾಗಿ ಅನ್​​ಲಾಕ್ ಜಾರಿಯಿಂದ ಮತ್ತೆ ಪ್ರವಾಸೋದ್ಯಮ ಕ್ಷೇತ್ರ ಚೇತರಿಕೆಯ ಹಾದಿಗೆ ಮರಳುತ್ತಿದ್ದರೂ ಇನ್ನೂ ನಾಲ್ಕೈದು ತಿಂಗಳು ಸಮಯ ಬೇಕಾಗಲಿದೆ.

ಆರು ತಿಂಗಳ ಕಾಲ ಲಾಕ್​​​ಡೌನ್​​​ನಿಂದ ರಾಜ್ಯದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಾವಿರಾರು ಕೋಟಿ ನಷ್ಟವಾಗಿದೆ. ರಾಜ್ಯದ ಜಿಡಿಪಿ ಕೊಡುಗೆಯಲ್ಲಿ ಶೇ.15ರಷ್ಟು ಪಾಲು ಪ್ರವಾಸೋದ್ಯಮದಿಂದ ಬರುತ್ತದೆ. 2 ಲಕ್ಷ ಕೋಟಿ ರೂ.ಗಳ ರಾಜ್ಯದ ಆದಾಯದಲ್ಲಿ ಶೇ.15ರಷ್ಟು ಅಂದರೆ ಆರು ತಿಂಗಳಿಗೆ 15 ಸಾವಿರ ಕೋಟಿ ರೂ.ಗಳಷ್ಟು ನೇರ ನಷ್ಟವಾಗಿದೆ. ಪರೋಕ್ಷ ನಷ್ಟವನ್ನೂ ಸೇರಿಸಿದರೆ 35-40 ಸಾವಿರ ಕೋಟಿ ನಷ್ಟ ಸಂಭವಿಸಿದೆ.

ನಲ್ವತ್ತು ಸಾವಿರಕ್ಕೂ ಅಧಿಕ ಕೋಟಿ ನಷ್ಟವಾಗಿ ನಲುಗಿದ ಪ್ರವಾಸೋದ್ಯಮ..

ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ಇಲ್ಲದ ಕಾರಣ ವಿದೇಶಿ ಪ್ರವಾಸಿಗರ ಪ್ರಶ್ನೆ ಉದ್ಭವವಾಗಲ್ಲ. ಡೊಮೆಸ್ಟಿಕ್ ವಿಮಾನಯಾನ ಸೇವೆ ಆರಂಭವಾದರೂ ಅಂತಾರಾಜ್ಯ ಪ್ರವಾಸಿಗರು ಆತಂಕದಿಂದ ಇನ್ನೂ ಆಗಮಿಸುತ್ತಿಲ್ಲ. ನೆರೆಹೊರೆ ಜಿಲ್ಲೆಯ ಪ್ರವಾಸಿಗರು ಮಾತ್ರ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಬೆಂಗಳೂರು ಪ್ರವಾಸಿಗರು ಕೇವಲ ವೀಕೆಂಡ್ ಟೂರಿಸಂ ಎಂದು ಹೋಗುತ್ತಿದ್ದರೂ ಆಯ್ದ ಕೆಲ ಸ್ಥಳಗಳಿಗೆ ಮಾತ್ರ ಭೇಟಿ ನೀಡುತ್ತಿದ್ದಾರೆ. ರಿಮೋಟ್ ಪ್ಲೇಸ್, ಹೋಂ ಸ್ಟೇ, ರೆಸಾರ್ಟ್​​ಗಳಿಗೆ ಮಾತ್ರ ಹೋಗುತ್ತಿದ್ದಾರೆ. ಹಾಗಾಗಿ, ಪ್ರವಾಸೋದ್ಯಮ ಕ್ಷೇತ್ರ, ಹೋಟೆಲ್ ಉದ್ಯಮ ಇನ್ನೂ ಚೇತರಿಕೆ ಕಂಡಿಲ್ಲ.

ಹೋಟೆಲ್ ಉದ್ಯಮ, ಸಿಬ್ಬಂದಿಗೆ ವೇತನ ಕೊಡಲು ಸಾಧ್ಯವಾಗದ ಸ್ಥಿತಿ ಎದುರಿಸುತ್ತಿದೆ. ವಿದ್ಯುತ್ ಬಿಲ್ ರಿಯಾಯಿತಿ ಕೇಳುವ ಹಂತ ತಲುಪಿದ್ದಾರೆ. ಪ್ರವಾಸಿ ಟ್ಯಾಕ್ಸಿ ಡ್ರೈವರ್​​ಗಳು ಕೆಲಸವಿಲ್ಲದೇ ಕುಳಿತಿದ್ದಾರೆ. ಪ್ರವಾಸಿಗರೇ ಬಾರದಿದ್ದಲ್ಲಿ ಅವರು ಜೀವನ ನಡೆಯುವುದು ಹೇಗೆ? ಲೋನ್ ಕಟ್ಟಲು ಸಾಧ್ಯವಾಗದೇ ಪರಿತಪಿಸುತ್ತಿದ್ದಾರೆ. ಪ್ರವಾಸಿ ಗೈಡ್​​ಗಳ ಪರಿಸ್ಥಿತಿ ಭಿನ್ನವಾಗಿಲ್ಲ. ಅವರಿಗೆ ಬೇರೆ ಕೆಲಸ ಗೊತ್ತಿಲ್ಲ, ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಬರುತ್ತಿಲ್ಲ. ಹಾಗಾಗಿ ಗೈಡ್​ಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಹೋಟೆಲ್‌ಗಳು, ಅಮ್ಯೂಸ್‌ಮೆಂಟ್ ಪಾರ್ಕ್, ಟೂರಿಸ್ಟ್ ಗೈಡ್​ಗಳು, ಪ್ರವಾಸಿ ಟ್ಯಾಕ್ಸಿ ಮಾಲೀಕರು ಲಾಕ್‌ಡೌನ್‌ನಿಂದ ನೇರ ನಷ್ಟಕ್ಕೊಳಗಾಗಿದ್ದಾರೆ.

ಮೈಸೂರಿನ ಅರಮನೆ, ಕೆಆರ್​ಎಸ್​, ಮೃಗಾಲಯ, ಚಾಮುಂಡಿಬೆಟ್ಟ, ನಂಜನಗೂಡು, ವಿಶ್ವವಿಖ್ಯಾತ ಜೋಗ್​ ಫಾಲ್ಸ್​, ಅಬ್ಬೆಫಾಲ್ಸ್​, ಹೊಗನೇಕಲ್ ಫಾಲ್ಸ್, ಗೋಕರ್ಣ, ಮಲ್ಪೆ ಬೀಚ್, ಭದ್ರಾ ಹುಲಿ ಮೀಸಲು ಪ್ರದೇಶ, ಬಂಡೀಪುರ, ಬನ್ನೇರುಘಟ್ಟ, ನಾಗರಹೊಳೆ, ಹಾಸನದ ಐಹೊಳೆ - ಪಟ್ಟದಕಲ್ಲು, ಬಾದಾಮಿ, ಶೃಂಗೇರಿ, ಮುರ್ಡೇಶ್ವರ, ಹಂಪಿಯ ವಿರೂಪಾಕ್ಷ ದೇವಾಲಯ​, ಗೋಲ್​ ಗುಂಬಜ್​, ಕೊಡಗಿನ ಮಡಿಕೇರಿ, ಕುದುರೆಮುಖ, ತಲ ಕಾವೇರಿ, ಬೆಂಗಳೂರಿನ ವಿಧಾನಸೌಧ, ಲಾಲ್​ಬಾಗ್​, ನಂದಿಬೆಟ್ಟ, ದಾಂಡೇಲಿ, ಚಿಕ್ಕಮಗಳೂರು ಹೀಗೆ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳು ಈಗ ಬಿಕೋ ಎನ್ನುತ್ತಿವೆ.

ಪ್ರವಾಸೋದ್ಯಮ ಸಚಿವ ಸಿ ಟಿ ರವಿ

ಲಾಕ್‌ಡೌನ್‌ನಿಂದ ತತ್ತರಗೊಂಡ ಪ್ರವಾಸೋದ್ಯಮ ಕ್ಷೇತ್ರಕ್ಕೆ ಸರ್ಕಾರದಿಂದ ಕಾಯಕಲ್ಪ ಅಗತ್ಯವಿದೆ. ನೆರವಿನ ಹಸ್ತದ ಅಭಯ ಸರ್ಕಾರದಿಂದ ಸಿಕ್ಕಿದ್ದರೂ ಎಷ್ಟರಮಟ್ಟಿಗೆ ಸಹಕಾರ ಸಿಗಲಿದೆ? ಯಾವ ರೀತಿ ಪ್ರವಾಸೋದ್ಯಮ ಕ್ಷೇತ್ರವನ್ನು ಹಳಿಗೆ‌ ತರಲಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

ABOUT THE AUTHOR

...view details