ಕರ್ನಾಟಕ

karnataka

ಮುಂದಿನ 4 ದಿನ ರಾಜ್ಯದಲ್ಲಿ ಭಾರಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ

By

Published : May 6, 2022, 10:44 AM IST

ಕರ್ನಾಟಕದಲ್ಲಿ ವರುಣನ ಅಬ್ಬರ ಇನ್ನೂ ಹೆಚ್ಚಾಗುತ್ತಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯ ಪರಿಣಾಮ ರಾಜ್ಯದ ಹಲವೆಡೆ ಉತ್ತಮ ಮಳೆಯಾಗುತ್ತಿದೆ. ಮುಂದಿನ 4 ದಿನ ಮತ್ತೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

Karnataka rains
ಸಾಂದರ್ಭಿಕ ಚಿತ್ರ

ಬೆಂಗಳೂರು:ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ ನಾಲ್ಕು ದಿನವೂ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಾಮರಾಜನಗರ, ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಮಂಡ, ಮೈಸೂರು, ಚಿತ್ರದುರ್ಗ, ಬಳ್ಳಾರಿ ಹಾಗೂ ದಾವಣಗೆರೆಯಲ್ಲಿ ಮೇ 6ರಂದು ಗುಡುಗು ಮಿಂಚು ಸಹಿತ ಜೋರು ಮಳೆ ಬೀಳಲಿದೆ.

ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆ ಬೀಳಲಿದೆ. ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆಯ ಅಬ್ಬರ ಪ್ರಾರಂಭವಾಗಿದೆ. ನಿನ್ನೆ ಕೂಡ ಹಲವೆಡೆ ವರ್ಷಧಾರೆ ಜೋರಾಗಿತ್ತು. ಏ.29ರಿಂದ ಮೇ 5ರವರೆಗೆ ರಾಜ್ಯಾದ್ಯಂತ ವಾಡಿಕೆಯಂತೆ 12 ಮಿ.ಮೀ ಮಳೆ ಬದಲಾಗಿ 19 ಮಿ.ಮೀ ಮಳೆಯಾಗಿದೆ. ಅಂದರೆ ಶೇ.63ರಷ್ಟು ಹೆಚ್ಚು ಸುರಿದಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಎಲ್ಲೆಲ್ಲಿ ಮಳೆ?: ಮಲೆನಾಡಿನ ವಿವಿಧೆಡೆ ಗುಡುಗುಸಹಿತ ಭಾರಿ ಮಳೆಯಾಗಿದೆ. ಶಿಕಾರಿಪುರ, ಸೊರಬದಲ್ಲಿ ಹೆಚ್ಚು ಮಳೆ ಬಿದ್ದಿದೆ. ಬುಧವಾರ ಶಿವಮೊಗ್ಗ ಸೇರಿ ಕೆಲವೆಡೆ ಉತ್ತಮ ಮಳೆಯಾಗಿದೆ. ಮಂಡ್ಯ ನಗರ ಸೇರಿ ಜಿಲ್ಲೆಯ ವಿವಿಧೆಡೆ ಮಳೆಯಾಗಿದೆ. ಮೈಸೂರಿನ ಹಲವೆಡೆ ಮಿಂಚು, ಗುಡುಗು, ಆಲಿಕಲ್ಲು ಸಹಿತ ಸಾಧಾರಣ ತುಂತುರು ಮಳೆಯಾಗಿದೆ. ಬಾಗಲಕೋಟೆ ನಗರದಲ್ಲಿ ಗಾಳಿ, ಮಿಂಚು-ಗುಡುಗು ಅಬ್ಬರ ಜೋರಾಗಿತ್ತು. ದಾವಣಗೆರೆ ಜಿಲ್ಲೆಯಲ್ಲಿ ಕೂಡ ಹೆಚ್ಚು ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಗಾಳಿಸಹಿತ ಭಾರಿ ಮಳೆ: ಬೆಸ್ಕಾಂ ವ್ಯಾಪ್ತಿಯಲ್ಲಿ 238 ವಿದ್ಯುತ್ ಕಂಬಗಳು ಧರಾಶಾಹಿ, ಪವರ್ ಕಟ್‌

ABOUT THE AUTHOR

...view details