ಕರ್ನಾಟಕ

karnataka

ETV Bharat / city

ಜುಲೈ 3ನೇ ವಾರದಲ್ಲಿ SSLC ಪರೀಕ್ಷೆ ಸಾಧ್ಯತೆ: 2nd PUC ವಿದ್ಯಾರ್ಥಿಗಳು ಪರೀಕ್ಷೆಯಿಲ್ಲದೆ ಪಾಸ್ - ದ್ವಿತೀಯ ಪಿಯುಸಿ ಪರೀಕ್ಷೆ

ದ್ವಿತೀಯ ಪಿಯುಸಿ ಹಾಗು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವ ಕುರಿತಾಗಿ ಶಿಕ್ಷಣ ತಜ್ಞರು, ಅಧಿಕಾರಿಗಳು, ಪೋಷಕರು, ಶಿಕ್ಷಕರು ಹಾಗೂ ಖಾಸಗಿ ಶಾಲಾ ಸಂಘಟನೆಗಳು ಮಾತ್ರವಲ್ಲದೆ, ಮುಖ್ಯಮಂತ್ರಿಗಳು, ಶಾಸಕ, ಸಚಿವರು ಸೇರಿ ಪ್ರಮುಖ ಜನಪ್ರತಿನಿಧಿಗಳಿಂದಲೂ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಎಸ್‌.ಸುರೇಶ್ ಕುಮಾರ್ ತಿಳಿಸಿದರು.

ಶಿಕ್ಷಣ ಸಚಿವ ಸುರೇಶ್​ ಕುಮಾರ್
ಶಿಕ್ಷಣ ಸಚಿವ ಸುರೇಶ್​ ಕುಮಾರ್

By

Published : Jun 4, 2021, 11:17 AM IST

Updated : Jun 4, 2021, 12:24 PM IST

ಬೆಂಗಳೂರು: ಕೇಂದ್ರ ಸರ್ಕಾರ ಸಿಬಿಎಸ್ಇ (CBSC) ಹಾಗೂ ಐಸಿಎಸ್ಐ(ICSI) ಪರೀಕ್ಷೆಗಳನ್ನು ರದ್ದು ಮಾಡಿದ ಬೆನ್ನಲ್ಲೇ ರಾಜ್ಯದಲ್ಲಿ ಎಸ್ಎಸ್ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಕುರಿತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದು ಸರ್ಕಾರದ ನಿರ್ಧಾರವನ್ನು ಪ್ರಕಟಿಸಿದರು.

ದ್ವಿತೀಯ ಪಿಯುಸಿಯ ಎಲ್ಲಾ ವಿದ್ಯಾರ್ಥಿಗಳೂ ತೇರ್ಗಡೆ​:

ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದುಪಡಿಸಿದ್ದೇವೆ. ಪ್ರಥಮ ಪಿಯುಸಿ ಫಲಿತಾಂಶ ಆಧರಿಸಿ ವಿದ್ಯಾರ್ಥಿಗಳಿಗೆ ಗ್ರೇಡಿಂಗ್ ನೀಡಲಾಗುವುದು. ಫಲಿತಾಂಶ ಸಮಾಧಾನವಿಲ್ಲದಿದ್ದರೆ ಕೊರೊನಾ ಕಡಿಮೆಯಾದ ನಂತರ ಮತ್ತೊಮ್ಮೆ ಪರೀಕ್ಷೆ ಮಾಡುತ್ತೇವೆ. ಸದ್ಯ ದ್ವಿತೀಯ ಪಿಯುಸಿಯ ಎಲ್ಲ ವಿದ್ಯಾರ್ಥಿಗಳು ಪಾಸ್ ಎಂದು ಸಚಿವ ಸುರೇಶ್​ ಕುಮಾರ್​ ತಿಳಿಸಿದ್ದಾರೆ.

2nd PUC ವಿದ್ಯಾರ್ಥಿಗಳು ಪರೀಕ್ಷೆಯಿಲ್ಲದೆ ಪಾಸ್

ಎಸ್​ಎಸ್​ಎಲ್​ಸಿ ಪರೀಕ್ಷೆ ಇರುತ್ತೆ:

ಈ ಬಾರಿ 8 ಲಕ್ಷ 75 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯುವವರಿದ್ದರು. ಕೆಲ ಸಮೀಕ್ಷೆಗಳಲ್ಲಿ ಪರೀಕ್ಷೆ ಬೇಡ ಅನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ, ಎಸ್​ಎಸ್​ಎಲ್​ಸಿಗೆ ಪರೀಕ್ಷೆ ನಡೆಸದೇ ಇರುವುದು ಸಾಧ್ಯವಿಲ್ಲ. ಎಸ್​ಎಸ್​ಎಲ್​ಸಿ ಮಕ್ಕಳನ್ನು ಕಳೆದ ವರ್ಷದ ಶೈಕ್ಷಣಿಕ ಪ್ರಗತಿ ಆಧಾರದ ಮೇಲೆ ಪಾಸ್​ ಮಾಡೋಣವೆಂದರೆ ಕಳೆದ ಬಾರಿ 9ನೇ ತರಗತಿ ಪರೀಕ್ಷೆಯೂ ನಡೆದಿಲ್ಲ. ಆದ್ದರಿಂದ ಈ ಬಾರಿ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿ ಪರೀಕ್ಷೆ ನಡೆಸಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.

SSLC ಪರೀಕ್ಷೆ ಹೀಗೆ ನಡೆಯುತ್ತದೆ..

- ಎಸ್​ಎಸ್​ಎಲ್​ಸಿ ಪರೀಕ್ಷೆಯನ್ನು ಎರಡೇ ಪ್ರಶ್ನೆ ಪತ್ರಿಕೆಗಳ ಮೂಲಕ ನಡೆಸಲಾಗುವುದು.

- ಒಟ್ಟು 6 ವಿಷಯಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗುವುದು. ಎರಡೇ ಪ್ರಶ್ನೆ ಪತ್ರಿಕೆಗಳನ್ನು ತೆಗೆಯಲಾಗುವುದು.

- ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ಈ ಮೂರು ವಿಷಯಗಳನ್ನು ಸೇರಿಸಿ ಒಂದು ಪೇಪರ್

- ಇನ್ನೊಂದು ಪತ್ರಿಕೆಯಲ್ಲಿ ಭಾಷಾ ವಿಷಯಗಳು ಇರಲಿವೆ.

- ಬಹು ಆಯ್ಕೆ ಪ್ರಶ್ನೆಗಳನ್ನು(Multiple choice questions) ಕೇಳಲಾಗುವುದು.

- ಸರಳ ಹಾಗೂ ನೇರ ಪ್ರಶ್ನೆಗಳಿರಲಿವೆ.

- ಗ್ರೇಡ್​ ಆಧಾರಿತ ಫಲಿತಾಂಶ. A, A+ ಮಾದರಿಯಲ್ಲಿ ಗ್ರೇಡ್​ ವ್ಯವಸ್ಥೆ ಇರಲಿದೆ.

ಜುಲೈ 3ನೇ ವಾರದಲ್ಲಿ SSLC ಪರೀಕ್ಷೆ ಸಾಧ್ಯತೆ

ಪರೀಕ್ಷೆ ಯಾವಾಗ?

- ಜುಲೈ 3ನೇ ವಾರದಲ್ಲಿ ಪರೀಕ್ಷೆ ನಡೆಸಲು ತೀರ್ಮಾನ

- 20 ದಿನ ಮುಂಚಿತವಾಗಿ ಪರೀಕ್ಷೆ ದಿನಾಂಕ ಘೋಷಣೆ

- ಕೋವಿಡ್ ಕಾರಣದಿಂದ ಪರೀಕ್ಷೆ ಬರೆಯಲು ಆಗದಿದ್ದರೆ, ಅಂತಹ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಅವಕಾಶ

- ಹೊಸ ಅಭ್ಯರ್ಥಿಗಳಾಗಿ ಪರೀಕ್ಷೆ ಬರೆಯಲು ಅವಕಾಶ

- ಒಟ್ಟು ಆರು ಸಾವಿರ ಕೇಂದ್ರಗಳಲ್ಲಿ ಪರೀಕ್ಷೆ

- ಒಂದು ಕೊಠಡಿಯಲ್ಲಿ 10-12 ವಿದ್ಯಾರ್ಥಿಗಳನ್ನು ಕೂರಿಸಿ ಪರೀಕ್ಷೆ

- ಎಸ್​​ಎಸ್​ಎಲ್​ಸಿ ಪರೀಕ್ಷೆ ನಡೆಯುವ ಕೊಠಡಿ ಮೇಲ್ವಿಚಾರಕರು ಕೊರೊನಾ ಲಸಿಕೆ ಪಡೆದಿರಬೇಕು ಎಂಬ ನಿಯಮ.

ಯಾರನ್ನೂ ಫೇಲ್​ ಮಾಡುವುದಿಲ್ಲ:

10ನೇ ತರಗತಿ ಪರೀಕ್ಷೆಯಲ್ಲಿ ಯಾರನ್ನೂ ಫೇಲ್​ ಮಾಡುವುದಿಲ್ಲ. ಮೊದಲೇ ಮಾದರಿ ಪ್ರಶ್ನೆ ಪತ್ರಿಕೆಯನ್ನು ನೀಡುತ್ತೇವೆ. ಅದನ್ನು ನೋಡಿಕೊಂಡು ಸಿದ್ಧತೆ ಮಾಡಿಕೊಳ್ಳಿ. ಒತ್ತಡವಾಗಲಿ, ಆತಂಕವಾಗಲಿ ಬೇಡ. ಒಂದು ಡೆಸ್ಕ್‌ಗೆ ಒಬ್ಬ ವಿದ್ಯಾರ್ಥಿಯನ್ನು ಕೂರಿಸುತ್ತೇವೆ. ಪರೀಕ್ಷೆ ಬರೆಯುವ ಎಲ್ಲರಿಗೂ N-95 ಮಾಸ್ಕ್ ನೀಡುತ್ತೇವೆ. ಮಾದರಿ ಪ್ರಶ್ನೆಪತ್ರಿಕೆ ಶಾಲೆಗಳಿಗೆ ಕಳುಹಿಸುತ್ತೇವೆ, ವೆಬ್‌ಸೈಟ್‌ನಲ್ಲೂ ಮಾದರಿ ಪ್ರಶ್ನೆಪತ್ರಿಕೆ ಹಾಕಲಾಗುವುದು ಎಂದು ಸಚಿವರು ವಿವರಿಸಿದರು.

ಮನೆಯ ಹತ್ತಿರದ ಕೇಂದ್ರಗಳಲ್ಲೇ ಪರೀಕ್ಷೆ:

ಕೊರೊನಾ ಕಾರಣ ವಿದ್ಯಾರ್ಥಿಗಳು ಮನೆಗೆ ತೆರಳಿರುತ್ತಾರೆ. ಪರೀಕ್ಷೆಗಾಗಿ ದೂರದ ಊರಿಗೆ ಅಥವಾ ಹಾಸ್ಟೆಲ್​​ಗೆ ಮರಳುವುದು ಕಷ್ಟವಾಗುತ್ತದೆ. ಹೀಗಾಗಿ ಮನೆಯ ಹತ್ತಿರದ ಕೇಂದ್ರಗಳಲ್ಲೇ ಪರೀಕ್ಷೆ ಬರೆಯುವ ಅವಕಾಶ ನೀಡುತ್ತಿದ್ದೇವೆ.

ಆಗಿನ ಪರಿಸ್ಥಿತಿಗೆ ತಕ್ಕಂತೆ ಮತ್ತೆ ನಿರ್ಧಾರ:

ಎಸ್​ಎಸ್​ಎಲ್​ಸಿ ಮಕ್ಕಳಿಗೆ ಜುಲೈ 3ನೇ ವಾರದಲ್ಲಿ ಪರೀಕ್ಷೆ ನಡೆಸುತ್ತೇವೆ ಎನ್ನುವುದು ಈಗಿನ ನಿರ್ಧಾರ. ಆದರೆ, ಮೂರನೇ ಅಲೆಯನ್ನು ಮತ್ತು ಆಗಿನ ಪರಿಸ್ಥಿತಿಗೆ ತಕ್ಕಂತೆ ಮತ್ತೆ ನಿರ್ಧರಿಸುತ್ತೇವೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.

Last Updated : Jun 4, 2021, 12:24 PM IST

ABOUT THE AUTHOR

...view details