ಬೆಂಗಳೂರು: ರಾಜ್ಯದ ವೈದ್ಯಕೀಯ ಶಿಕ್ಷಣದಲ್ಲಿ ಗಮನಾರ್ಹ ಸುಧಾರಣೆ ತರುವ ಉದ್ದೇಶದಿಂದ ಏಮ್ಸ್ ಸಂಸ್ಥೆ ಆರಂಭಿಸಬೇಕೆಂದು ಸಚಿವ ಡಾ.ಕೆ.ಸುಧಾಕರ್ ಅವರು ಕೇಂದ್ರ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಿದ್ದು ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಈ ಕುರಿತು ಸಚಿವರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
ನಿನ್ನೆ ಕೇಂದ್ರ ಆರೋಗ್ಯ ಸಚಿವ ಮಾನ್‌ಸುಖ್ ಮಾಂಡವೀಯರನ್ನು ದೇಹಲಿಯಲ್ಲಿ ಭೇಟಿ ಮಾಡಿದ ಸಚಿವ ಸುಧಾಕರ್ ಚರ್ಚೆ ನಡೆಸಿದ್ದಾರೆ. ರಾಜ್ಯದಲ್ಲಿ ಈಗಾಗಲೇ ವೈದ್ಯಕೀಯ ಶಿಕ್ಷಣ ಕ್ಷೇತ್ರ ಸಾಕಷ್ಟು ಬೆಳೆದಿದೆ. ಪ್ರತಿಭಾವಂತ ವಿದ್ಯಾರ್ಥಿಗಳು ವಿವಿಧ ಮೆಡಿಕಲ್ ಕಾಲೇಜುಗಳಲ್ಲಿ ಶಿಕ್ಷಣ ಪಡೆದು ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವೈದ್ಯರಾಗುವ ಕನಸು ಹೊತ್ತ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಕಲ್ಪಿಸಲು ಏಮ್ಸ್ ಸಂಸ್ಥೆ ಸ್ಥಾಪಿಸುವುದು ಸೂಕ್ತ ಎಂದು ಡಾ.ಕೆ.ಸುಧಾಕರ್, ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.