ಬೆಂಗಳೂರು:ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ದಿನದಿಂದ ದಿನಕ್ಕೇ ತೀವ್ರವಾಗುತ್ತಿದೆ. ಸರ್ಕಾರದ ಕ್ರಮ ಖಂಡಿಸಿ ಸಾಹಿತಿಗಳ ಸರಣಿ ಪತ್ರ ಚಳವಳಿ ಮುಂದುವರಿದಿದೆ. ಈ ಮಧ್ಯೆ ಇದೀಗ ಪಠ್ಯದಲ್ಲಿ ಬಸವ ತತ್ವಕ್ಕೆ ವಿರುದ್ಧವಾಗಿ ಪರಿಷ್ಕರಣೆ ಮಾಡಲಾಗಿದೆ ಎಂದು ಇಂಟರ್ ನ್ಯಾಷನಲ್ ಬಸವ ಮ್ಯೂಸಿಯಂ ಎಕ್ಸ್ಪರ್ಟ್ ಕಮಿಟಿಯ 7 ಜನ ಲೇಖಕರ ರಾಜೀನಾಮೆ ನೀಡಿದ್ದಾರೆ. ಸರ್ಕಾರ ಇತಿಹಾಸವನ್ನು ತಿರುಚುವ ಕೆಲಸ ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಪ್ರತಿಭಟನೆ ಅಂಗವಾಗಿ ಕಮಿಟಿಯ ಲೇಖಕರು ರಾಜೀನಾಮೆ ಸಲ್ಲಿಸಿದ್ದಾರೆ.
ರಾಜೀನಾಮೆ ನೀಡಿದ ಸಾಹಿತಿಗಳು:
- ಎಸ್ ಎಂ ಜಾಮಾದಾರ್ , ಐಎಎಸ್ ಅಧಿಕಾರಿ
- ಡಾ. ಗುರುಪಾದ ಮರೀಗುದ್ದಿ - ಸಾಹಿತಿ
- ಡಾ. ಹನುಮಾಕ್ಷಿಗೋಗಿ - ಸಾಹಿತಿ
- ಡಾ. ಬಸವರಾಜ್ ಸಬರಾದ್ - ಸಾಹಿತಿ
- ರಂಜಾನ್ ದರ್ಗಾ- ಸಾಹಿತಿ
- ಶಂಕರ್ ದೇವನೂರು - ಸಾಹಿತಿ
- ಡಾ.ಟಿ ಆರ್ ಚಂದ್ರಶೇಖರ್ - ಸಾಹಿತಿ
ಇತ್ತ, ಸಾಹಿತಿ ಎಚ್.ಎಸ್.ಅನುಪಮಾ ತಮ್ಮ ಎರಡು ಬರೆಹಗಳನ್ನು ಪಠ್ಯಪುಸ್ತಕಗಳಿಂದ ಹಿಂಪಡೆಯಲು ಮುಂದಾಗಿದ್ದಾರೆ. 7ನೇ ತರಗತಿಯ ಕನ್ನಡ ಭಾಷಾ( ಪ್ರಥಮ) ಪಠ್ಯ ಪುಸ್ತಕದಲ್ಲಿ ಸಾವಿತ್ರಿಬಾಯಿ ಫುಲೆ( ಗದ್ಯ) ಬರಹವನ್ನ ಹಾಗೂ 7ನೇ ತರಗತಿಯ ಕನ್ನಡ ಭಾಷಾ( ತೃತೀಯ) ಪಠ್ಯಪುಸ್ತಕದಲ್ಲಿ 'ನೆನೆವುದೆನ್ನ ಮನ' ಅಳವಡಿಸಲು ಈ ಮೊದಲು ಒಪ್ಪಿಗೆ ನೀಡಿದ್ದೆ. ಆದರೆ ಶಿಕ್ಷಣದ ಬಗೆಗಾಗಲಿ, ಕನ್ನಡಿಯಂತಹ ಮನಸ್ಸಿನ ಮಕ್ಕಳ ಭವಿಷ್ಯದ ಬಗ್ಗೆ ಕಿಂಚಿತ್ತೂ ಕಾಳಜಿಯಿರದ ದುರುಳರ ಪಠ್ಯಪುಸ್ತಕದಲ್ಲಿ ಕೈಕಾಲಾಡಿಸಿ ಮಾಡಿರುವ ಅವಾಂತರ ತುಂಬಾ ಬೇಸರ ತಂದಿದೆ. ಈ ಕಾರಣದಿಂದ ನನ್ನ ಬರಹ ಅಳವಡಿಸಲು ನೀಡಿದ್ದ ಒಪ್ಪಿಗೆಯನ್ನ ಹಿಂಪಡೆಯುವುದಾಗಿ ತಿಳಿಸಿದ್ದಾರೆ.
ಹಾಗೇ, ಲೇಖಕಿ, ಸಾಮಾಜಿಕ ಚಿಂತಕಿ ದು.ಸರಸ್ವತಿಯವರು ತಮ್ಮ ಬರೆಹವನ್ನು ಹಿಂದಕ್ಕೆ ಪಡೆದಿದ್ದಾರೆ. ಏಳನೇ ತರಗತಿಯ ಕನ್ನಡ ಭಾಷಾ ಪಠ್ಯ ಪುಸ್ತಕದಲ್ಲಿ ನನ್ನ ಅಯ್ಯ ಎಂಬ ಗದ್ಯ ಬರಹವನ್ನ ಅಳವಡಿಸಲಾಗಿದೆ. ಆದರೆ ಕುವೆಂಪು ಅವರಂತಹ ವ್ಯಕ್ತಿತ್ವವನ್ನ ಅವಮಾನಿಸುತ್ತಿರುವ ಹಿನ್ನೆಲೆಯಲ್ಲಿ ಗದ್ಯ ಬರಹವನ್ನ ಹಿಂಪಡೆಯುವುದಾಗಿ ಹೇಳಿದ್ದಾರೆ. ಈ ಮೂಲಕ ಸಾಹಿತಿಗಳ ವಾಪಸ್ ಚಳವಳಿ ಮುಂದುವರೆದಿದೆ.