ಬೆಂಗಳೂರು : ಸುಪ್ರೀಂ ಕೋರ್ಟ್ ಪೀಠವನ್ನು ಬೆಂಗಳೂರಿನಲ್ಲಿ ಸ್ಥಾಪಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಹಾಗೆಯೇ, ಈ ವಿಚಾರವಾಗಿ ರಾಷ್ಟ್ರಪತಿಗಳ ಗಮನ ಸೆಳೆಯುವಂತೆ ಕೋರಿದೆ.
ಕೆಎಸ್ಬಿಸಿ ಅಧ್ಯಕ್ಷ ಎಲ್. ಶ್ರೀನಿವಾಸ ಬಾಬು ನೇತೃತ್ವದ ನಿಯೋಗ ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿ ಮಾಡಿ ಲಿಖಿತ ಮನವಿ ಸಲ್ಲಿಸಿದೆ. ಸುಪ್ರೀಂ ಕೋರ್ಟ್ ನಲ್ಲಿ ಶೇ.40ರಷ್ಟು ಪ್ರಕರಣಗಳು ದಕ್ಷಿಣ ಭಾರತದಿಂದಲೇ ದಾಖಲಾಗಿವೆ. ದೇಶದ ದೂರದ ರಾಜ್ಯಗಳಿಂದ ದೆಹಲಿಗೆ ಬಂದು ಪ್ರಕರಣಗಳನ್ನು ದಾಖಲಿಸಲು ಕಕ್ಷೀದಾರರ ವೆಚ್ಚ ಹೆಚ್ಚಿದಂತೆಯೇ ಸುಪ್ರೀಂಕೋರ್ಟ್ ಮೇಲಿನ ಕೆಲಸದ ಒತ್ತಡವೂ ಹೆಚ್ಚುತ್ತಿದೆ. ಹೀಗಾಗಿಯೇ ಕಾನೂನು ತಜ್ಞರು ದಕ್ಷಿಣ ಭಾರತದಲ್ಲಿಯೂ ಸುಪ್ರೀಂ ಕೋರ್ಟ್ನ ಖಾಯಂ ಪೀಠ ಸ್ಥಾಪಿಸುವ ಕುರಿತು ಪ್ರಸ್ತಾಪಿಸಿದ್ದಾರೆ.
ಈಗಾಗಲೇ ಹಲವು ರಾಜ್ಯಗಳ ವಕೀಲರ ಪರಿಷತ್ತುಗಳು, ವಕೀಲರ ಸಂಘಗಳು ದಕ್ಷಿಣ ಭಾರತದಲ್ಲಿ ಸುಪ್ರೀಂ ಪೀಠ ಸ್ಥಾಪನೆ ಕೋರಿ ಲಿಖಿತ ಮನವಿ ಸಲ್ಲಿಸಿವೆ. 18ನೇ ಕಾನೂನು ಆಯೋಗವು ಸಾಂವಿಧಾನಿಕ ವಿಷಯಗಳನ್ನು ವಿಚಾರಣೆ ನಡೆಸಲು ದೆಹಲಿಯಲ್ಲಿ ಸಾಂವಿಧಾನಿಕ ಪೀಠ ಇರಿಸಿಕೊಂಡು, ನಾಲ್ಕು ಶಾಶ್ವತ ಪೀಠಗಳನ್ನು ರಚಿಸಲು ಶಿಫಾರಸ್ಸು ಮಾಡಿದೆ.