ಬೆಂಗಳೂರು :45 ಲಕ್ಷದವರೆಗಿನ ಫ್ಲಾಟ್ ಖರೀದಿ ಮಾಡುವವರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ವಿಧಾನಸಭೆಯಿಂದ ಅಂಗೀಕೃತಗೊಂಡಿದ್ದ ಕರ್ನಾಟಕ ಸ್ಟಾಂಪು ತಿದ್ದುಪಡಿ ವಿಧೇಯಕವನ್ನು ಧ್ವನಿಮತದ ಮೂಲಕ ವಿಧಾನ ಪರಿಷತ್‌ನಲ್ಲಿಂದು ಅಂಗೀಕರಿಸಲಾಯಿತು.
ಕಲಾಪದಲ್ಲಿ ವಿಧೇಯಕ ಮಂಡನೆ ಮಾಡಿದ ಕಂದಾಯ ಸಚಿವ ಆರ್ ಅಶೋಕ್, ಬಡ ಮಧ್ಯಮವರ್ಗದ ಜನರಿಗೆ ಅನುಕೂಲವಾಗಲಿ ಎಂದು ಈಗಾಗಲೇ 35 ಲಕ್ಷದವರೆಗಿನ ಮನೆ ಖರೀದಿಗೆ ಇದ್ದ ಶೇ.5ರ ಸ್ಟಾಂಪ್ ಡ್ಯೂಟಿ ಶೇ.3ಕ್ಕೆ ಇಳಿಸಲಾಗಿದೆ. ಈಗ ಅದನ್ನು 35 ಲಕ್ಷದಿಂದ 45 ಲಕ್ಷದವರೆಗಿನ ಮನೆಗಳ ಖರೀದಿಗೂ ಶೇ.5ರ ಸ್ಟಾಂಪ್ ಡ್ಯೂಟಿಯನ್ನು ಶೇ.3ಕ್ಕೆ ಇಳಿಸುವಂತೆ ತಿದ್ದುಪಡಿಸಿ ಮಾಡಲಾಗಿದೆ ಎಂದು ವಿವರಣೆ ನೀಡಿದರು.
ರಾಜ್ಯದ ಎಲ್ಲಾ ನಗರಕ್ಕೂ ಇದು ಅನ್ವಯವಾಗಲಿದೆ. ಮಾರ್ಗಸೂಚಿ ದರ ಅವೈಜ್ಞಾನಿಕ ಎನ್ನುವ ಮಾತು ಸದಸ್ಯರಿಂದ ಬಂದಿದೆ. ಕೆಲ ಕಡೆ ಅವೈಜ್ಞಾನಿಕ ಮಾರ್ಗಸೂಚಿ ದರ ಇದೆ. ಕೆಲವು ಕಡೆ ಮಾರುಕಟ್ಟೆ ದರಕ್ಕಿಂತ ಮಾರ್ಗಸೂಚಿ ದರವೇ ಹೆಚ್ಚಿದೆ. ಇಂತಹ ಸಂದರ್ಭಗಳಲ್ಲಿ ಕಳ್ಳದಾರಿ ಹೆಚ್ಚಾಗಲಿದೆ.
ಅವೈಜ್ಞಾನಿಕ ಮಾರ್ಗಸೂಚಿ ದರ ಇರುವ ಕಡೆ ಸರಿಪಡಿಸುವ ಪ್ರಯತ್ನ ನಾವು ಮಾಡಲಿದ್ದೇವೆ. ಸದ್ಯ ಈ ಮಸೂದೆ ಫ್ಲಾಟ್ ಖರೀದಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ತರಲಾಗಿದೆ. ಹಾಗಾಗಿ, ಬಿಲ್‌ಗೆ ಅನುಮೋದನೆ ಕೊಡಿ ಎಂದು ಮನವಿ ಮಾಡಿದರು. ಬಿಲ್ ಅನ್ನು ಪಕ್ಷಾತೀತವಾಗಿ ಎಲ್ಲ ಸದಸ್ಯರು ಸ್ವಾಗತಿಸಿ ಕೆಲವು ಸಲಹೆ ನೀಡಿದರು. ನಂತರ ಧ್ವನಿಮತದ ಮೂಲಕ ಕರ್ನಾಟಕ ಸ್ಟಾಂಪು ತಿದ್ದುಪಡಿ ವಿಧೇಯಕವನ್ನು ವಿಧಾನ ಪರಿಷತ್ ಅಂಗೀಕಾರಿಸಿತು.