ಬೆಂಗಳೂರು :ವಿಧಾನಸಭೆಯಲ್ಲಿ ಅಂಗೀಕೃತವಾದ ರೂಪದಲ್ಲಿರುವ 'ಕರ್ನಾಟಕ ಪ್ರದೇಶಾಭಿವೃದ್ಧಿ ಅಧಿನಿಯಮ 1966 (ತಿದ್ದುಪಡಿ) ವಿಧೇಯಕ' ವಿಧಾನ ಪರಿಷತ್ನಲ್ಲಿ ಅಂಗೀಕಾರವಾಯಿತು. ವಿಧೇಯಕ ಮಂಡಿಸಿ ವಿವರಣೆ ನೀಡಿದ ಸಚಿವ ಮುರುಗೇಶ್ ನಿರಾಣಿ, ರೈತರಿಗೆ ಅನುಕೂಲಕರವಾದ ವಿಧೇಯಕವಾಗಿದೆ. ಕೇಂದ್ರ, ರಾಜ್ಯದಲ್ಲಿ ಪ್ರತ್ಯೇಕ ಕಾನೂನು ಇತ್ತು. ಆದ್ದರಿಂದ ಕೇಂದ್ರದ ಕಾಯ್ದೆಯ ಕೆಲ ಅಂಶ ಅಳವಡಿಸಿ ಇಲ್ಲಿ ಮಂಡಿಸುತ್ತಿದ್ದೇವೆ.
ರಾಜ್ಯದ ಬೊಕ್ಕಸಕ್ಕೆ ಇದರಿಂದ ಹೊರೆ ಆಗಲ್ಲ. ಜಮೀನು ಪಡೆದಾಗ ರೈತರಿಗೆ ಪರಿಹಾರ ನೀಡಲು ಅನುಕೂಲ ಆಗಲಿದೆ ಎಂದು ವಿವರಿಸಿದರು. ಬಿಜೆಪಿ ಸದಸ್ಯೆ ತೇಜಸ್ವಿನಿಗೌಡ, ಎನ್.ತಿಪ್ಪೇಸ್ವಾಮಿ, ಪಿ.ಆರ್ ರಮೇಶ್, ಪ್ರತಿಪಕ್ಷ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್, ಮರಿತಿಬ್ಬೇಗೌಡ, ಬಿ.ಎಂ. ಫಾರೂಕ್ ವಿಧೇಯಕದ ಮೇಲೆ ಮಾತನಾಡಿದರು.
1.66 ಲಕ್ಷ ಎಕರೆ ಭೂಮಿ ಅಂದರೆ ಕೃಷಿ ಭೂಮಿಯ ಶೇ.0.02ರಷ್ಟು ಭೂಮಿಯಾಗಿದೆ. ಕೈಗಾರಿಕೆಗಳು ರಾಜ್ಯಕ್ಕೆ ಬರಲಿ ಎನ್ನುವುದು ಆಶಯ. 99 ವರ್ಷ ಲೀಸ್ ನೀಡುತ್ತೇವೆ. ವಾಣಿಜ್ಯ, ಗೃಹ ವಿಭಾಗದ ತೆರಿಗೆ ಪದ್ಧತಿ ಇತ್ತು. ನಾವು ಮೂರನೇ ವಿಭಾಗ ಮಾಡಿ ಕೈಗಾರಿಕೆಗಳಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ. ಎಸ್ಸಿ-ಎಸ್ಟಿ ಸಮುದಾಯದವರಿಗೆ ನೀಡಿದ ಭೂಮಿಯಲ್ಲಿ ಕೆಲವೆಡೆ ಕುಟುಂಬ ಸದಸ್ಯರು ಹೆಚ್ಚು ಭೂಮಿಕೊಂಡಿದ್ದು, ತಡವಾಗಿ ಗಮನಕ್ಕೆ ಬಂದಿದೆ.
ಅಂತಹವುಗಳ ಮೇಲೆ ಕ್ರಮಕೈಗೊಳ್ಳುತ್ತೇವೆ. ಸಾಕಷ್ಟು ಬಾಕು ಇರುವ ಬೇಡಿಕೆ ಇದ್ದು, ಅದನ್ನು ಸರಿಪಡಿಸುವ ಕಾರ್ಯ ಮಾಡುತ್ತಿದ್ದೇವೆ. 3 ಸಾವಿರ ಕೋಟಿ ರೂ. ಅಂದಾಜು ಮೊತ್ತ ಟೈರ್ ಒನ್ ನಗರದಲ್ಲೇ ಕೆಐಎಡಿಬಿಗೆ ಬರುವುದು ಬಾಕಿ ಇದೆ. 188 ಎಕರೆ ಭೂಮಿ ನಾವು ಪಡೆದಿರುವ ಭೂಮಿಯಿಂದ 5 ಸಾವಿರ ಕೋಟಿ ರೂ. ಬಾಕಿ ಹಣ ಬರಬೇಕಿದೆ. ಬೆಂಗಳೂರು ನಗರದಿಂದಲೇ ಬರಬೇಕಿದೆ. ಸಾಕಷ್ಟು ಅಕ್ರಮ ಆಗಿದೆ. ಏನೂ ಆಗಿಲ್ಲ ಅಂತಾ ಹೇಳಲ್ಲ. ಮಾಹಿತಿ ಸಿಕ್ಕ ಸಂದರ್ಭ ಕ್ರಮಕೈಗೊಳ್ಳುತ್ತೇವೆ.
ಮಾಗಡಿ ರಸ್ತೆಯಲ್ಲಿ125 ಎಕರೆ ಭೂಮಿ ನಮ್ಮದು ಇರುವುದೇ ಗೊತ್ತಿಲ್ಲ. ಈ ಭೂಮಿಗೆ ಪರಿಹಾರ ಸರ್ಕಾರ ನೀಡಿದೆ. ಆದರೆ, ಭೂಮಿ ಬೇರೆಯವರ ಬಳಿ ಇದೆ. ನಮ್ಮ ಕೆಐಎಡಿಬಿ ಕಚೇರಿಯಲ್ಲಿ ಕಡತವೇ ಇಲ್ಲ. ಇದಕ್ಕೆ ಕಾನೂನು ಸಹಕಾರ ಪಡೆದು ಸಮಸ್ಯೆ ಪರಿಹರಿಸುತ್ತೇವೆ. ಸಾಕಷ್ಟು ಕಡೆ ನಮ್ಮ ಭೂಮಿ ಬೇರೆಯವರು ಕಬಳಿಸಿ, ಮತ್ಯಾರಿಗೋ ಮಾರಿದ್ದಾರೆ. ಇದನ್ನು ಪತ್ತೆ ಮಾಡಿ ಕ್ರಮಕೈಗೊಳ್ಳುತ್ತೇವೆ ಎಂದರು.
ಸಭಾಪತಿಗಳು ಮಾತನಾಡಿ, ಕೆಐಎಡಿಬಿ ಭೂಮಿ ಬೇರೆಯವರು ಬಳಸಿಕೊಳ್ಳುತ್ತಿರುವವರು ಕಂಡು ಬಂದರೆ ಮಾಹಿತಿ ನೀಡಿ ಅಂತಾ ಜಾಹೀರಾತು ನೀಡಿ ಎಂದು ಸಲಹೆ ಇತ್ತರು. ಕೆಐಎಡಿಬಿ ಸುಧಾರಣೆಗೆ ನಾನು ಶ್ರಮಿಸುತ್ತೇನೆ. ನಿಮ್ಮ ಸಹಕಾರ ಬೇಕು ಎಂದು ಸಚಿವರು ತಿಳಿಸಿದರು. ಅಂತಿಮವಾಗಿ ವಿಧೇಯಕ ಅಂಗೀಕೃತವಾಯಿತು.
ಇದನ್ನೂ ಓದಿ:ಪ್ರತಿಪಕ್ಷಗಳ ಸಭಾತ್ಯಾಗದ ನಡುವೆ ಪರಿಷತ್ನಲ್ಲಿ 'ಕರ್ನಾಟಕ ಬಂಧಿಖಾನೆ ತಿದ್ದುಪಡಿ ವಿಧೇಯಕ' ಅಂಗೀಕಾರ