ಬೆಂಗಳೂರು:ಪೆರೋಲ್ ಮೇಲೆ ಹೊರಬಂದು ತಪ್ಪಿಸಿಕೊಳ್ಳುವ ಕೈದಿಗಳಿಗೆ ಜಾಮೀನು ನೀಡಿದ್ದ ಜಾಮೀನುದಾರ ಜಮೀನು ಮುಟ್ಟುಗೋಲು ಹಾಕಿಕೊಳ್ಳುವ ಅಂಶ ವಿರೋಧಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಭಾತ್ಯಾಗ ನಡೆಸಿವೆ. ಪ್ರತಿಪಕ್ಷಗಳ ಸಭಾತ್ಯಾಗದ ನಡುವೆಯೂ ಕರ್ನಾಟಕ ಬಂಧಿಖಾನೆಗಳ ತಿದ್ದುಪಡಿ ವಿಧೇಯಕ-2022 ಅನ್ನು ವಿಧಾನ ಪರಿಷತ್ ಅಂಗೀಕರಿಸಿತು. ವಿಧಾನ ಪರಿಷತ್ ಶಾಸನ ರಚನೆ ಕಲಾಪದಲ್ಲಿ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಕರ್ನಾಟಕ ಬಂಧಿಖಾನೆಗಳ ತಿದ್ದುಪಡಿ ವಿಧೇಯಕ-2022 ಅನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಮಂಡಿಸಿದರು.
ಪೆರೋಲ್ ಸೆಕ್ಷನ್ ಬಿಗಿ ಮಾಡುವ ಅಗತ್ಯವಿದೆ. ಜೈಲಿನಲ್ಲಿ ಮೊಬೈಲ್ ಸೀಜ್ ಮಾಡಿ ಸುಮ್ಮನಾಗದೆ, ಕೇಸ್ ಹಾಕಲಾಗುತ್ತದೆ. ಅದಕ್ಕಾಗಿ ತಿದ್ದುಪಡಿ ತರಲಾಗಿದೆ ಎಂದು ಬಿಲ್ಗೆ ಅಂಗೀಕಾರ ನೀಡುವಂತೆ ಸದನಕ್ಕೆ ಮನವಿ ಮಾಡಿದರು. ಬಿಲ್ ಮೇಲೆ ಮಾತನಾಡಿದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಈ ಮಸೂದೆ ನೋಡಿದರೆ ಗೃಹ ಸಚಿವಾಲಯದ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಸರ್ಕಾರದ ನಡೆಯನ್ನು ಟೀಕಿಸಿದರು.
ಅಧಿಕಾರಿಗಳಿಗೆ ಏನು ಕ್ರಮ?:ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ನಿರ್ವಾಣ ಸ್ಥಿತಿಯಲ್ಲಿ ಕೈದಿಗಳನ್ನು ಒಳಗೆ ಕಳಿಸಲಾಗುತ್ತದೆ. ನಾವು ಜೈಲಿಗೆ ಹೋದಾಗ ಬಟ್ಟೆ ಬಿಚ್ಚಿಸಿ ತಪಾಸಣೆ ಮಾಡಿ ಒಳಗೆ ಕಳುಹಿಸಿದ್ದರು. ಆದರೂ ಜೈಲಿನೊಳಗೆ ಫೋನ್, ಗಾಂಜಾ ಹೇಗೆ ಸಿಗುತ್ತದೆ?.
ಕೆಲ ವರ್ಷಗಳ ಹಿಂದೆ ವಿಐಪಿ ಸವಲತ್ತು ಕಲ್ಪಿಸಿರುವ ಕುರಿತು ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳೇ ಬಹಿರಂಗ ಆರೋಪ-ಪ್ರತ್ಯಾರೋಪ ಮಾಡಿದ್ದರು. ಕೈದಿಗಳಲ್ಲಿ ಮೊಬೈಲ್ ಸಿಕ್ಕರೆ ಅವರಿಗೆ ದಂಡ ಸರಿ. ಆದರೆ ಅಧಿಕಾರಿಗಳಿಗೆ ಏನು ಕ್ರಮ?. ಅಧಿಕಾರಿಗಳಿಗೂ ಕಠಿಣ ಕ್ರಮ ವಿಧಿಸಬೇಕು ಎಂದು ಒತ್ತಾಯಿಸಿದರು.
ಪ್ರಾಮಾಣಿಕರು ಮೂಲೆ ಗುಂಪು:ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಹಿರಿಯ ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಬಂಧಿಖಾನೆ ಪರಿಶೀಲನೆ ನಡೆಸಿ ವರದಿ ನೀಡಿದ್ದರು. ಆದರೆ ಅವರನ್ನು ಮೂಲೆಗೆ ವರ್ಗಾವಣೆ ಮಾಡಿದರು. ಪ್ರಾಮಾಣಿಕರನ್ನು ಮೂಲೆ ಗುಂಪು ಮಾಡಲಾಗುತ್ತದೆ. ರೂಪಾ ವರದಿ ಮೇಲೆ ಬಂಧಿಖಾನೆ ಸುಧಾರಣೆಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು.
ಜಮೀನು ಮುಟ್ಟುಗೋಲು ಸರಿಯಲ್ಲ:ನ್ಯಾಯಾಲಯ ಹೇಳಿದೆ ಎಂದು ಈಗ ತಿದ್ದುಪಡಿ ತರುತ್ತಿದ್ದೀರಿ. ಯಾರೂ ಪೆರೋಲ್ಗೆ ಜಾಮೀನು ಕೊಡಬಾರದು ಎಂದು ಪೆರೋಲ್ಗೆ ಜಾಮೀನು ನೀಡುವವರ ಜಮೀನು ಮುಟ್ಟುಗೋಲು ಹಾಕಿಕೊಳ್ಳಲು ಹೊರಟಿರುವುದು ಸರಿಯಲ್ಲ. ತಪ್ಪಿತಸ್ಥ ಅಧಿಕಾರಿಗಳಿಗೆ ಬೇಕಾದರೆ ಜೀವಾವಧಿ ಶಿಕ್ಷೆ ಎಂದು ತನ್ನಿ. ಆಗ ಅಪರಾಧಗಳು ನಿಲ್ಲುತ್ತವೆ. ಅದನ್ನು ಬಿಟ್ಟು ಪೆರೋಲ್ ಜಾಮೀನುದಾರರ ಜಮೀನು ಮುಟ್ಟುಗೋಲು ಸರಿಯಲ್ಲ ಎಂದರು.
ಕಾಂಗ್ರೆಸ್ ಸದಸ್ಯ ಸಲೀಂ ಅಹಮದ್ ಮಾತನಾಡಿ, ಜೈಲಿನಲ್ಲಿ ಲಾಂಗು, ಮಚ್ಚುಗಳು ಸಿಗುತ್ತಿವೆ. ಹೊರಗಿನ ರೀತಿ ರೌಡಿಸಂ ನಡೆಯುತ್ತಿದೆ. ಇದೆಲ್ಲಾ ಹೇಗೆ ಸಾಧ್ಯ?. ಇದಕ್ಕೆ ಯಾರು ಕಾರಣ? ಇದರ ಬಗ್ಗೆಯೂ ಚಿಂತನೆ ಅಗತ್ಯ ಎಂದರು. ಕಾಂಗ್ರೆಸ್ ಸದಸ್ಯ ನಜೀರ್ ಅಹಮ್ಮದ್ ಮಾತನಾಡಿ, ಪೆರೋಲ್ಗೆ ಬೇಲ್ ಕೊಡಲು ಮಧ್ಯವರ್ತಿಗಳಿದ್ದಾರೆ. ಬೇಲ್ಗಳು ಮಾರಾಟಕ್ಕಿವೆ. ₹5 ಸಾವಿರ ಕೊಟ್ಟರೆ ಬೇಲ್ಗೆ ಆಸ್ತಿ ಪತ್ರದ ದಾಖಲೆ ಕೊಡುವ ವ್ಯವಸ್ಥೆ ಇದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಸದಸ್ಯ ಪ್ರಾಣೇಶ್ ಮಾತನಾಡಿ, ಜೈಲಿನಲ್ಲಿ ಆಡಳಿತ ನಡೆಸುವವರು ಕೈದಿಗಳಾಗಿದ್ದಾರೆ. ಮೊಬೈಲ್ ಜಾಮರ್ ಹಾಕಿ, ತುರ್ತು ಸಂಪರ್ಕಕ್ಕೆ ಲ್ಯಾಂಡ್ ಲೈನ್ ಇದೆ. ಅಗತ್ಯವಿದ್ದಾಗ ಬಳಸಬಹುದು ಎಂದು ಸಲಹೆ ನೀಡಿ ಬಿಲ್ನ್ನು ಸ್ವಾಗತಿಸಿದರು. ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಮಾತನಾಡಿ, ಘೋರ ಅಪರಾಧ ಮಾಡಿದವರನ್ನು ಸಾಮಾನ್ಯ ಅಪರಾಧಿಗಳನ್ನು ಒಟ್ಟಿಗೆ ಇಡಬಾರದು. ಎಲ್ಲಾ ಪ್ರತ್ಯೇಕ ಇಡಬೇಕು ಎಂಬ ಸಲಹೆ ನೀಡಿ ಬಿಲ್ ಸ್ವಾಗತಿಸಿದರು.