ಬೆಂಗಳೂರು: ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆ ವೇಳೆಗೆ ಹಳೇ ಮೈಸೂರು ಭಾಗದಲ್ಲಿ ಮತ್ತೆ ಪ್ರಾಬಲ್ಯ ಸಾಧಿಸಲು ಕಾಂಗ್ರೆಸ್ ಸಿದ್ಧತೆ ಆರಂಭಿಸಿದ್ದು, ಜೆಡಿಎಸ್ ಜನಪ್ರಿಯ ಮುಖಂಡರಿಗೆ ಗಾಳ ಹಾಕಲು ಮುಂದಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಈಗಾಗಲೇ ಜೆಡಿಎಸ್ನಿಂದ ಸಾಕಷ್ಟು ಹಿರಿಯ ನಾಯಕರು ಕಾಂಗ್ರೆಸ್-ಬಿಜೆಪಿಯತ್ತ ಮುಖ ಮಾಡಿದ್ದಾರೆ. ಈ ಬೆಳವಣಿಗೆಯಿಂದ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬಲಗೊಳ್ಳಬಹುದು ಇಲ್ಲವೇ ತಮಗಿರುವ ನೆಲೆಯನ್ನು ಜೆಡಿಎಸ್ ಇಲ್ಲವೇ ಬಿಜೆಪಿ ಕಿತ್ತುಕೊಳ್ಳಬಹುದು ಎಂಬ ಆತಂಕದಲ್ಲಿರುವ ರಾಜ್ಯ ಕಾಂಗ್ರೆಸ್ ನಾಯಕರು, ಜೆಡಿಎಸ್ ನಾಯಕರನ್ನು ಸೆಳೆಯುವ ಕಾರ್ಯಕ್ಕೆ ಮುಂದಾಗಿದ್ದಾರೆ. ಬಿಜೆಪಿ ಅಧಿಕಾರದಲ್ಲಿರುವ ಹಿನ್ನೆಲೆ ಅಲ್ಲಿಂದ ಮುಖಂಡರನ್ನು ಸೆಳೆಯುವುದು ಕಷ್ಟ. ಆದ್ದರಿಂದ ಜೆಡಿಎಸ್ ಮುಖಂಡರತ್ತ ರಾಜ್ಯ ಕಾಂಗ್ರೆಸ್ ನಾಯಕರು ಕಣ್ಣು ಹಾಕಿದ್ದಾರೆ ಎನ್ನಲಾಗುತ್ತಿದೆ.
ಯಾರ್ಯಾರ ನಾಯಕತ್ವ!
ಈಗಾಗಲೇ ಮಾಜಿ ಸಚಿವರಾದ ಚೆಲುವರಾಯಸ್ವಾಮಿ, ಮಾಗಡಿ ಬಾಲಕೃಷ್ಣ, ರಮೇಶ್ ಬಂಡಿಸಿದ್ದೇಗೌಡ ಮತ್ತಿತರರು ಜೆಡಿಎಸ್ ತೊರೆದು ಕಾಂಗ್ರೆಸ್ಗೆ ಬಂದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗಿರುವ, ಜೆಡಿಎಸ್ ಪಕ್ಷ ತೊರೆಯಲು ಮುಂದಾಗಿರುವ ಮುಖಂಡರನ್ನು ಸಂಪರ್ಕಿಸಲು ಸೂಚಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯಗೆ ಹಳೇ ಮೈಸೂರು ಭಾಗದ ಹೆಚ್ಚಿನ ಜೆಡಿಎಸ್ ನಾಯಕರನ್ನು ಸೆಳೆಯುವ ಜವಾಬ್ದಾರಿ ನೀಡಲಾಗಿದೆ. ಇವರು ಈಗಾಗಲೇ ಇಲ್ಲಿನ ಕಾಂಗ್ರೆಸ್ ನಾಯಕರ ಜತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಚುನಾವಣೆಗೆ ಒಂದು ವರ್ಷ ಮುನ್ನವೇ ಜೆಡಿಎಸ್ನಿಂದ ನಾಯಕರನ್ನು ಕರೆತಂದು ಕ್ಷೇತ್ರಗಳನ್ನು ಗುರುತಿಸಿ, ಅವರನ್ನು ಜನರಿಗೆ ಪರಿಚಯಿಸುವ ಕಾರ್ಯ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.