ಕರ್ನಾಟಕ

karnataka

ETV Bharat / city

ಪರಿಷತ್ ಚುನಾವಣೆ ಬಹಿರಂಗ ಪ್ರಚಾರಕ್ಕೆ ತೆರೆ : ಮತಗಟ್ಟೆ, ಅಭ್ಯರ್ಥಿ ಹಾಗೂ ಮತದಾರರೆಷ್ಟು? - ಪರಿಷತ್‌ ಚುನಾವಣೆ ಬಹಿರಂಗ ಪ್ರಚಾರಕ್ಕೆ ತೆರೆ

ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರೂ ಪಕ್ಷಗಳು ಪರಿಷತ್ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿವೆ. ತಮ್ಮ ತಮ್ಮ ಅಭ್ಯರ್ಥಿಗಳ ಗೆಲುವಿಗೆ ಶತಾಯ-ಗತಾಯ ಪ್ರಯತ್ನ ನಡೆಸುತ್ತಿವೆ. ಗೆಲುವಿಗಾಗಿ ಸಾಧ್ಯವಿರುವ ಎಲ್ಲ ತಂತ್ರ-ಪ್ರತಿತಂತ್ರ ರೂಪಿಸುತ್ತಿವೆ. ಹೀಗಾಗಿ, ವಿಧಾನ ಪರಿಷತ್ ಚುನಾವಣಾ ಫಲಿತಾಂಶ ರಾಜ್ಯದ ರಾಜಕೀಯ ದಿಕ್ಸೂಚಿಯಾದರೂ ಅಚ್ಚರಿ ಪಡಬೇಕಿಲ್ಲ..

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

By

Published : Dec 8, 2021, 2:28 PM IST

ಬೆಂಗಳೂರು :ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ನ 25 ಸ್ಥಾನಗಳಿಗೆ ಡಿ.10ರಂದು ನಡೆಯುವ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಡಿ.10ರಂದು ಬೆಳಗ್ಗೆ 8 ರಿಂದ ಸಂಜೆ 4ಗಂಟೆವರೆಗೆ ಮತದಾನ ನಡೆಯಲಿದೆ.

ಚುನಾವಣೆಯ ಬಹಿರಂಗ ಪ್ರಚಾರ ನಿನ್ನೆಯೇ(ಮಂಗಳವಾರ) ಮುಗಿದಿದೆ. ಮೂರು ಪಕ್ಷಗಳ ಘಟಾನುಘಟಿ ನಾಯಕರು ಚುನಾವಣಾ ಕ್ಷೇತ್ರಗಳಿಂದ ಹೊರ ಬಂದಿದ್ದಾರೆ. ತಮ್ಮ ಅಭ್ಯರ್ಥಿಗಳ ಗೆಲುವಿಗೆ ತಂತ್ರ-ಪ್ರತಿತಂತ್ರ ರೂಪಿಸುವಲ್ಲಿ ನಾಯಕರು ನಿರತರಾಗಿದ್ದಾರೆ.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ, ಜಗದೀಶ್ ಶೆಟ್ಟರ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಪ್ರಮುಖ ನಾಯಕರು ಚುನಾವಣಾ ಪ್ರಚಾರ ನಡೆಸಿದ್ದರು.

ಚುನಾವಣಾ ಪ್ರಚಾರದ ವೇಳೆ ಆಡಳಿತ ಮತ್ತು ಪ್ರತಿಪಕ್ಷಗಳ ನಾಯಕರ ನಡುವೆ ಪರಸ್ಪರ ಆರೋಪ-ಪ್ರತ್ಯಾರೋಪ ಜೋರಾಗಿಯೇ ಕೇಳಿ ಬಂದವು. ಕಾಂಗ್ರೆಸ್ ನಾಯಕರು ಜೆಡಿಎಸ್​ ಅ​ನ್ನು ಟಾರ್ಗೆಟ್ ಮಾಡಿದರೆ, ಬಿಜೆಪಿ ನಾಯಕರು ಜೆಡಿಎಸ್ ಬಗ್ಗೆ ಯಾವುದೇ ಚಕಾರ ಎತ್ತದೇ ಮೌನಕ್ಕೆ ಶರಣಾಗಿದ್ದರು. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಜೆಡಿಎಸ್ ಬೆಂಬಲ ಕೇಳಿದ್ದರಿಂದ ಜೆಡಿಎಸ್ ವಿರುದ್ಧ ಮಾತನಾಡುವ ಬಿಜೆಪಿ ನಾಯಕರ ಬಾಯಿಗೆ ಬೀಗ ಬಿದ್ದಿತ್ತು.

ಕಣದಲ್ಲಿರುವ ಅಭ್ಯರ್ಥಿಗಳೆಷ್ಟು?:25 ಕ್ಷೇತ್ರಗಳಲ್ಲಿ ಒಟ್ಟು 90 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ 89 ಮಂದಿ ಪುರುಷ ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ, ಚಿಕ್ಕಮಗಳೂರು ಕ್ಷೇತ್ರದಿಂದ ಒಬ್ಬ ಮಹಿಳಾ ಅಭ್ಯರ್ಥಿ ಮಾತ್ರ ಕಣದಲ್ಲಿರುವುದು ಈ ಬಾರಿಯ ಚುನಾವಣೆಯ ವಿಶೇಷ. ಕಾಂಗ್ರೆಸ್ ಅಭ್ಯರ್ಥಿ ಎ.ವಿ.ಗಾಯತ್ರಿ ಶಾಂತೇಗೌಡ ಚಿಕ್ಕಮಗಳೂರಿನಿಂದ ಸ್ಪರ್ಧಿಸಿದ್ದಾರೆ.

  • ಬಿಜೆಪಿ ಹಾಗೂ ಕಾಂಗ್ರೆಸ್ ತಲಾ 20 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ, ಜೆಡಿಎಸ್‍ 6 ಕ್ಷೇತ್ರಗಳಲ್ಲಿ ಮಾತ್ರ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
  • ಆಮ್ ಆದ್ಮಿ ಪಕ್ಷದಿಂದ 3 ಕ್ಷೇತ್ರಗಳಲ್ಲಿ.
  • ಕನ್ನಡ ಚಳವಳಿ ವಾಟಾಳ್ ಪಕ್ಷ-1
  • ಕರ್ನಾಟಕ ರಾಷ್ಟ್ರ ಸಮಿತಿ-1
  • ಜನಹಿತ ಪಕ್ಷ-1
  • ಜೆಡಿಯು-1
  • ಜನತಾ ಪಾರ್ಟಿ-2
  • ಎಸ್ ಡಿಪಿಐ-1
  • ಪಕ್ಷೇತರರು- 33 ಅಭ್ಯರ್ಥಿಗಳು ಸೇರಿ ಒಟ್ಟು 90 ಮಂದಿ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

ಎಷ್ಟು ಮತಗಟ್ಟೆ ಸ್ಥಾಪನೆ? :25 ಕ್ಷೇತ್ರಗಳ ಚುನಾವಣೆಗೆ 6,073 ಮತಗಟ್ಟೆಗಳನ್ನು ತೆರೆಯಲಾಗುತ್ತದೆ. ಪುರುಷರು 47,368 ಹಾಗೂ 51,474 ಮಹಿಳೆಯರು ಮತ್ತು ಇತರ 3 ಮಂದಿ ಸೇರಿದಂತೆ ಒಟ್ಟು 98,846 ಸದಸ್ಯರು ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ. ಚುನಾವಣೆಗೆ 7,073 ಪಿಆರ್‌ಒಗಳು, 9344 ಪಿಒಗಳು ಹಾಗೂ 6648 ಮೈಕ್ರೋ ಅಬ್ಸರ್ವರ್‌ಗಳನ್ನು ನಿಯೋಜಿಸಲಾಗಿದೆ.

ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರೂ ಪಕ್ಷಗಳು ಪರಿಷತ್ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿವೆ. ತಮ್ಮ ತಮ್ಮ ಅಭ್ಯರ್ಥಿಗಳ ಗೆಲುವಿಗೆ ಶತಾಯ-ಗತಾಯ ಪ್ರಯತ್ನ ನಡೆಸುತ್ತಿವೆ. ಗೆಲುವಿಗಾಗಿ ಸಾಧ್ಯವಿರುವ ಎಲ್ಲ ತಂತ್ರ-ಪ್ರತಿತಂತ್ರ ರೂಪಿಸುತ್ತಿವೆ. ಹೀಗಾಗಿ, ವಿಧಾನ ಪರಿಷತ್ ಚುನಾವಣಾ ಫಲಿತಾಂಶ ರಾಜ್ಯದ ರಾಜಕೀಯ ದಿಕ್ಸೂಚಿಯಾದರೂ ಅಚ್ಚರಿ ಪಡಬೇಕಿಲ್ಲ.

ಡಿ.14 ಕ್ಕೆ ಮತ ಎಣಿಕೆ :ಡಿ.14ರಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ. ಅಂದೇ ಫಲಿತಾಂಶ ಹೊರಬೀಳುವ ಸಾಧ್ಯತೆಗಳಿವೆ. 20 ಜಿಲ್ಲಾ ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ. ಡಿ.16ಕ್ಕೆ ಪರಿಷತ್ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಇದನ್ನೂ ಓದಿ:ಶಾಲೆಗಳಲ್ಲಿ ಪರಿಷ್ಕೃತ ಎಸ್ಒಪಿ ಜಾರಿ ಕುರಿತು ಅಧಿಕಾರಿಗಳ ಜೊತೆ ಸಿಎಂ ಮಹತ್ವದ ಸಭೆ!

ABOUT THE AUTHOR

...view details