ಬೆಂಗಳೂರು :ರಾಜ್ಯಾದ್ಯಂತ ಹಿಜಾಬ್ ತೀರ್ಪು ಬಗ್ಗೆ ಚರ್ಚೆಯಾಗುತ್ತಿದೆ. ಹೈಕೋರ್ಟ್ ತೀರ್ಪಿನ ಬಗ್ಗೆ ಸಚಿವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಸಚಿವ ಅಶ್ವತ್ಥ್ ನಾರಾಯಣ ಹೇಳಿದ್ದು ಹೀಗೆ :ವಿದ್ಯಾರ್ಥಿಗಳು ಆಯಾ ಶಾಲಾ-ಕಾಲೇಜುಗಳು ಸೂಚಿಸುವ ಸಮವಸ್ತ್ರ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಹೈಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
ರಾಜ್ಯ ಹೈಕೋರ್ಟ್ ಸಮವಸ್ತ್ರದ ವಿಚಾರದಲ್ಲಿ ಸರಕಾರದ ಆದೇಶವನ್ನು ಎತ್ತಿ ಹಿಡಿದಿದೆ. ಇದನ್ನು ಎಲ್ಲ ವಿದ್ಯಾರ್ಥಿಗಳೂ ಗೌರವಿಸಿ, ಪಾಲಿಸಬೇಕು ಎಂದಿದ್ದಾರೆ. ಯಾವುದೇ ಧರ್ಮದ ಮಕ್ಕಳಾದರೂ ಶಿಕ್ಷಣಕ್ಕೆ ಆದ್ಯ ಗಮನ ಕೊಟ್ಟು, ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳುವುದರ ಕಡೆಗೆ ಗಮನ ಕೊಡಬೇಕು. ಯಾವುದೇ ಧಾರ್ಮಿಕ ವಸ್ತ್ರಗಳಿಗೆ ಅನಗತ್ಯ ಆದ್ಯತೆ ನೀಡುವ ಮೂಲಕ ಬದುಕಿನ ಸದವಕಾಶಗಳನ್ನು ವ್ಯರ್ಥ ಮಾಡಿಕೊಳ್ಳಬಾರದು ಎಂದರು.
ಓದಿ:ಮಕ್ಕಳಿಗೆ ಶಿಕ್ಷಣಕ್ಕಿಂತ ಮುಖ್ಯ ಯಾವುದೂ ಇಲ್ಲ: 'ಹಿಜಾಬ್' ತೀರ್ಪಿನ ಬಗ್ಗೆ ಸಿಎಂ ಪ್ರತಿಕ್ರಿಯೆ
ಎಲ್ಲರೂ ಸೌಹಾರ್ದದಿಂದ ಮತ್ತು ಪರಸ್ಪರ ಗೌರವದಿಂದ ಬದುಕಬೇಕು. ಹಿಂದೆಂದೂ ಶಾಲಾ-ಕಾಲೇಜುಗಳಲ್ಲಿ ಇಂತಹ ವಿವಾದ ಕಂಡು ಬಂದಿರಲಿಲ್ಲ. ಕೆಲವು ವಿಚ್ಛಿದ್ರಕಾರಿ ಶಕ್ತಿಗಳು ಬೇಕೆಂದೇ ಈ ವಿವಾದವನ್ನು ಸೃಷ್ಟಿಸಿದ್ದವು. ನ್ಯಾಯಾಲಯವು ಈ ವಿಚಾರವನ್ನು ಆಳವಾಗಿ ಅಧ್ಯಯನ ಮಾಡಿ, ಸರಿಯಾದ ತೀರ್ಪು ನೀಡಿದೆ. ಈ ಮೂಲಕ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕೆ ಈ ತೀರ್ಪು ನೀಡಿದೆ ಎಂದರು.
ಈಶ್ವರಪ್ಪ ಅಭಿಪ್ರಾಯ :ಹಿಜಾಬ್ ಕುರಿತು ಹೈಕೋರ್ಟ್ ನೀಡಿರುವ ತೀರ್ಪನ್ನು ಸಂತೋಷದಿಂದ ಸ್ವಾಗತ ಮಾಡುತ್ತೇನೆ ಎಂದು ಗ್ರಾಮೀಣಾಭಿವೃದ್ದಿ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ಶಿವಮೊಗ್ಗದಲ್ಲಿ ತಿಳಿಸಿದ್ದಾರೆ. ಗೊಂದಲ ನಿವಾರಣೆ ಆಗುವ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಬೇಕು ಎಂದರು.
ಕೋರ್ಟ್ನ ತೀರ್ಪಿನ ಬಗ್ಗೆ ಎಲ್ಲರು ಬದ್ದವಾಗಿರಬೇಕು. ಸರ್ಕಾರದ ತೀರ್ಮಾನವನ್ನು ಕೋರ್ಟ್ ಎತ್ತಿ ಹಿಡಿದಿರುವುದು ಸಹ ಸ್ವಾಗತ ಮಾಡುತ್ತೇನೆ. ಕೋರ್ಟ್ ಮಧ್ಯಂತರ ತೀರ್ಪು ನೀಡಿತ್ತು. ಆ ತೀರ್ಪನ್ನು ಫಾಲೋ ಮಾಡಿದ್ರೆ ಈ ಗೊಂದಲ ಆಗ್ತಿರಲಿಲ್ಲ ಎಂದರು.