ಬೆಂಗಳೂರು:ಪ್ರತಿಭಾನ್ವಿತ ಕ್ರೀಡಾಪಟುಗಳ ಶೋಧನೆಗಾಗಿ ರೂಪಿಸಲಾಗಿರುವ ರಾಜ್ಯ ಮಿನಿ ಒಲಿಂಪಿಕ್ಸ್ (14 ವರ್ಷದೊಳಗಿನ) ಕ್ರೀಡಾಕೂಟದ 2ನೇ ಆವೃತ್ತಿಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗು ಕ್ರೀಡಾ ಸಚಿವ ನಾರಾಯಣ ಗೌಡ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ಅದ್ಧೂರಿ ಚಾಲನೆ ನೀಡಿದರು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಿಎಂ, ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು. ಗೆಲುವು-ಸೋಲು ಒಂದು ನಾಣ್ಯದ ಎರಡು ಮುಖಗಳು. ಸರ್ಕಾರ ಕ್ರೀಡೆಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ. ಉದ್ಯಾನ ನಗರಿ, ಐಟಿ ನಗರಿ ಎಂಬ ಬಿರುದು ಹೊಂದಿರುವ ಬೆಂಗಳೂರು ಮುಂದಿನ ಐದು ವರ್ಷಗಳಲ್ಲಿ ದೇಶದ ಕ್ರೀಡಾ ರಾಜಧಾನಿಯಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಲಕ್ಷ್ಯ ಸೇನ್‌ಗೆ 5 ಲಕ್ಷ ರೂ ಬಹುಮಾನ:ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್‌ನಲ್ಲಿ ಬಲಿಷ್ಠ ಇಂಡೊನೇಷ್ಯಾ ತಂಡವನ್ನು ಮಣಿಸಿ ಐತಿಹಾಸಿಕ ಸ್ವರ್ಣ ಪದಕ ಗೆದ್ದ ಭಾರತ ತಂಡದ ಸದಸ್ಯ ಲಕ್ಷ್ಯ ಸೇನ್‌ಗೆ ಸಿಎಂ 5 ಲಕ್ಷ ರೂ ನಗದು ಬಹುಮಾನ ಘೋಷಿಸಿದರು. ಉತ್ತರಾಖಂಡ್ನ ಅಲ್ಮೋರದ ಲಕ್ಷ್ಯ ಸೇನ್, ಬೆಂಗಳೂರಿನ ಹೊರವಲಯದಲ್ಲಿರುವ ಪಡುಕೋಣೆ ದ್ರಾವಿಡ್ ಉತ್ಕೃಷ್ಠ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಕಲಾ ತಂಡಗಳ ಮೆರುಗು:ಕಂಠೀರವ ಒಳಾಂಗಣದಲ್ಲಿ ನಡೆದ ಉದ್ಘಾಟನಾ ಸಮಾರಂಭಕ್ಕೆ ವಿವಿಧ ಜಾನಪದ ಕಲಾ ತಂಡಗಳು ಮೆರುಗು ನೀಡಿದವು. ರಾಷ್ಟ್ರೀಯ ಲಾಂಗ್‌ಜಂಪ್ ಪಟು ಅದ್ವಿಕಾ, ಕ್ರೀಡಾ ಉನ್ನತಿಗಾಗಿ ಶ್ರಮಿಸುವ ಪ್ರತಿಜ್ಞೆ ಸ್ವೀಕರಿಸಿದರು. ಹಾಕಿ, ಬಾಕ್ಸಿಂಗ್ ತಂಡದ ಸದಸ್ಯರಿಂದ ಕ್ರೀಡಾ ಜ್ಯೋತಿ ಬೆಳಗಿತು. ಇದಕ್ಕೂ ಮುನ್ನ ಆರ್ಚರಿ, ಬಾಕ್ಸಿಂಗ್ ಸೇರಿದಂತೆ ವಿವಿಧ ಕ್ರೀಡಾ ತಂಡಗಳ ಸದಸ್ಯರಿಂದ ರಾಜ್ಯಪಾಲರು ವಂದನೆ ಸ್ವೀಕರಿಸಿದರು. ಸೋಮವಾರದಿಂದ ಮೇ 22ರವರೆಗೆ ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ನಡೆಯಲಿರುವ 21 ಕ್ರೀಡಾ ವಿಭಾಗಗಳ ಸ್ಪರ್ಧೆಗಳು ಆಯೋಜನೆಗೊಂಡಿವೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಮೇ 16ರಿಂದ ರಾಜ್ಯ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟ