ಬೆಂಗಳೂರು :ವಿಧಾನ ಪರಿಷತ್ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸಭಾಪತಿಗಳ ಸೂಚನೆ ಮೇರೆಗೆ ಸಚಿವ ಎಸ್ ಟಿ ಸೋಮಶೇಖರ್ ಸದನಕ್ಕೆ ತಮ್ಮನ್ನು ಪರಿಚಯಿಸಿಕೊಳ್ಳಲು ಮುಂದಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯ ಸಿಎಂ ಇಬ್ರಾಹಿಂ, ಇದೇನಿದು ಅನಾಥ ಮಕ್ಕಳು ಎದ್ದು ನಿಂತು ಹೇಳಿದಂತಾಗುತ್ತಿದೆಯಲ್ಲ ಎಂದು ಸಚಿವರ ಕಾಲೆಳೆದರು.
ಹೊಸ ಸಚಿವ ಸಂಪುಟ ರಚನೆಯಾದ ಹಿನ್ನೆಲೆಯಲ್ಲಿ ಸದನಕ್ಕೆ ಆಗಮಿಸುವ ಸಚಿವರನ್ನು ಸದನಕ್ಕೆ ಪರಿಚಯಿಸಿಕೊಡುವುದು ವಾಡಿಕೆ. ಆದರೆ, ಇಂದು ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಇಬ್ಬರೂ ಕಲಾಪದಲ್ಲಿ ಇರಲಿಲ್ಲ.
ಹೀಗಾಗಿ, ನಿಮ್ಮನ್ನು ನೀವೇ ಪರಿಚಯಿಸಿಕೊಳ್ಳಿ ಎಂದು ಸಭಾಪತಿ ಬಸವರಾಜ ಹೊರಟ್ಟಿ ಸೂಚಿಸಿದರು. ಸಭಾಪತಿಗಳ ನಿರ್ದೇಶನದಂತೆ ಸಚಿವ ಎಸ್.ಟಿ ಸೋಮಶೇಖರ್ ತಮ್ಮನ್ನು ಸದನಕ್ಕೆ ಪರಿಚಯಿಸಿಕೊಳ್ಳಲು ಮುಂದಾದರು. ಈ ವೇಳೆ ಮಧ್ಯಪ್ರವೇಶಿಸಿದ ಸಿಎಂ ಇಬ್ರಾಹಿಂ, ಇದು ಅನಾಥ ಮಕ್ಕಳು ಎದ್ದು ನಿಂತು ಹೇಳಿದಂತಾಗುತ್ತಿದೆ.
ಸಭಾನಾಯಕ ಅಥವಾ ಸಿಎಂ ಹೊಸ ಸಚಿವರನ್ನು ಸದನಕ್ಕೆ ಪರಿಚಯ ಮಾಡಿಕೊಡಬೇಕು ಎಂದು ಕಾಲೆಳೆದರು. ಇದಕ್ಕೆ ಮೊದಲು ಸಹಮತ ವ್ಯಕ್ತಪಡಿಸಿದ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ನಂತರ ಸೆಲ್ಫ್ ಇಂಡ್ರೆಕ್ಷನ್ ಮಾಡಿಕೊಳ್ಳುವುದರಲ್ಲಿ ತಪ್ಪೇನಿಲ್ಲ ಎಂದರು.
ಘಟೋದ್ಗಜನ ಪ್ರಸ್ತಾಪ :ಘಟೋದ್ಗಜನನ್ನು ಭೀಮ ಕೊಂದ ಬಗೆಯನ್ನು ಸಚಿವರು ನೀಡಿದ ಉತ್ತರಕ್ಕೆ ನಿದರ್ಶನವಾಗಿಸಿದ ಹಾಸ್ಯ ಸನ್ನಿವೇಶ ಪರಿಷತ್ ಕಲಾಪದಲ್ಲಿ ನಡೆಯಿತು. ಪುರಸಭೆಗಳಿಗೆ ಸರ್ಕಾರದಿಂದ ಅನುದಾನ ಸಮರ್ಪಕವಾಗಿ ಬಾರದಿರುವ ಕುರಿತು ಕೇಳಿದ ಹಲವು ಪ್ರಶ್ನೆಗೆ ಸರ್ಕಾರದ ಉತ್ತರದಲ್ಲಿ ಸಾಮ್ಯತೆ ಇದ್ದಿದ್ದನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ನ ಧರ್ಮಸೇನ ಅವರು, ಘಟೋದ್ಗಜನನ್ನು ಭೀಮ ಹೇಗೆ ಕೊಂದ ಎಂದರೆ ಗುದ್ದಿ ಗುದ್ದಿ ಗುದ್ದಿ ಕೊಂದ ಎನ್ನುವ ಉತ್ತರ ನೀಡುವ ರೀತಿ ಎಲ್ಲಾ ಪ್ರಶ್ನೆಗೆ ಒಂದೇ ಉತ್ತರ ಕೊಟ್ಟಿದ್ದಾರೆ ಎಂದು ಸರ್ಕಾರದ ಕಾಲೆಳೆದರು.
ನಿಖರ ಉತ್ತರಕ್ಕೆ ಬೇಡಿಕೆ ಇಟ್ಟಾಗ ಇದಕ್ಕೆ ಉತ್ತರಿಸಿದ ಸಚಿವ ಎಂಟಿಬಿ ನಾಗರಾಜ್, ಪುರಸಭೆಗಳಿಗೆ ಆಯವ್ಯಯದ ಅನುದಾನ ಕಡಿತವಾಗಿದ್ದರೆ ಅದನ್ನು ಬಿಡುಗಡೆ ಮಾಡಿಸಲು ಸಿದ್ಧನಿದ್ದೇನೆ. ಸಿಎಂಗೆ ಹೇಳಿ ಬಿಡುಗಡೆ ಮಾಡಿಸುತ್ತೇನೆ. ಹಾಗಾಗಿ, ಆ ಬಗ್ಗೆ ಗಮನಕ್ಕೆ ತನ್ನಿ ಎಂದರು.
ಕಳಪೆ ಕಾಮಗಾರಿಗೆ ಅಧಿಕಾರಿಗಳ ವಿರುದ್ಧ ಕ್ರಮ :ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಕಳಪೆ ಗುಣಮಟ್ಟದ ಕಾಮಗಾರಿಗಳು ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದ ವೇಳೆ ಒಂದೇ ನಗರಕ್ಕೆ ಸ್ಮಾರ್ಟ್ ಸಿಟಿ ಮತ್ತು ಅಮೃತ್ ಯೋಜನೆ ತೆಗೆದುಕೊಂಡಿದ್ದೀರಿ. ಯೋಜನೆಗಾಗಿ ರಸ್ತೆ ಅಗೆದು ಹೋಗುತ್ತಿದ್ದೀರಾ? ಟೆಲಿಫೋನ್, ಅಂಬಾನಿ ಕೇಬಲ್, ಒಳಚರಂಡಿ, ನೀರಾವರಿ ಚರಂಡಿ ಹೀಗೆ ಹಲವು ಕಾರಣಗಳಿಗೆ ರಸ್ತೆ ಅಗೆಯುತ್ತಾರೆ. ಒಂದೇ ಬಾರಿ ರಸ್ತೆ ಅಗೆದು ಕಾಮಗಾರಿ ಮಾಡುವಂತೆ ನೋಡಿಕೊಳ್ಳಬೇಕು.
ಒಬ್ಬರು ಬಂದು ಅಗೆದು ಟಾರ್ ಹಾಕಿ ಹೋಗ್ತಾರೆ, ಇನ್ನೊಬ್ಬರು ಬಂದು ಮತ್ತೆ ರಸ್ತೆ ಅಗೆಯುತ್ತಾರೆ? ಹೀಗಾದರೆ, ಗುಣಮಟ್ಟ ಯಾರು ನೋಡುತ್ತಿದ್ದಾರೆ? ಹೊಸ ರಸ್ತೆ ಕೆಲ ದಿನದಲ್ಲಿ ರಸ್ತೆಯೇ ಇಲ್ಲದಂತೆ ಆಗಿರುತ್ತದೆ. ಅಷ್ಟು ಕಳಪೆಯಾಗಿರುವುದಕ್ಕೆ ಯಾರು ಹೊಣೆ? ಸಂಬಂಧಪಟ್ಟ ಅಧಿಕಾರಿ ವಿರುದ್ಧ ಕ್ರಮ ಏಕಿಲ್ಲ? ನಮ್ಮ ಮನೆಯ ಮುಂದೆಯೇ ಈ ಘಟನೆ ನಡೆಯುತ್ತಿದೆ ಎಂದು ಸಿಎಂ ಇಬ್ರಾಹಿಂ ಹೇಳಿದರು.