ಬೆಂಗಳೂರು:ಕರ್ನಾಟಕ ವಿಧಾನಪರಿಷತ್ತಿನ 2 ಶಿಕ್ಷಕ ಮತ್ತು ಪದವೀಧರ ಕ್ಷೇತ್ರಗಳು ಸೇರಿ 4 ಸ್ಥಾನ ಮತ್ತು ರಾಜ್ಯಸಭೆಯ 4 ಸ್ಥಾನಗಳಿಗೆ ಚುನಾವಣಾ ಆಯೋಗ ದಿನಾಂಕವನ್ನು ಘೋಷಿಸಿದೆ. ವಿಧಾನಪರಿಷತ್ತಿಗೆ ಜೂನ್ 13 ರಂದು ಮತದಾನ ನಡೆದರೆ, ಜೂನ್ 10 ರಂದು ರಾಜ್ಯಸಭೆಗೆ ಚುನಾವಣೆ ನಡೆಯಲಿದೆ.
ವಾಯುವ್ಯ ಪದವೀಧರ ಕ್ಷೇತ್ರದ ನಿರಾಣಿ ಹನುಮಂತಪ್ಪ ರುದ್ರಪ್ಪ, ದಕ್ಷಿಣ ಪದವೀಧರ ಕ್ಷೇತ್ರದ ಕೆ.ಟಿ ಶ್ರೀಕಂಠೇಗೌಡ ಅವರ ಅವಧಿ ಜುಲೈ 4ಕ್ಕೆ ಮುಗಿಯಲಿದೆ. ವಾಯುವ್ಯ ಶಿಕ್ಷಕರ ಕ್ಷೇತ್ರದಿಂದ ಅರುಣ್ ಶಹಾಪುರ್, ದಕ್ಷಿಣ ಶಿಕ್ಷಕರ ಕ್ಷೇತ್ರದ ಬಸವರಾಜ್ ಹೊರಟ್ಟಿ ಅವರಿಂದ ತೆರವಾಗುವ ಸ್ಥಾನಗಳಿಗೆ ಜೂನ್ 13 ರಂದು ಚುನಾವಣೆ ನಡೆಯಲಿದೆ.
ಮೇ 26 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನ, 27ರಂದು ನಾಮಪತ್ರಗಳ ಪರಿಶೀಲನೆ, 30 ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಜೂನ್ 13ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, ಜೂ.15 ಕ್ಕೆ ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.