ಬೆಂಗಳೂರು: ನ್ಯಾಯಮೂರ್ತಿ ಎಸ್.ಆರ್. ಬನ್ನೂರಮಠ ನೇತೃತ್ವದ ಕರ್ನಾಟಕ ಕಾನೂನು ಆಯೋಗ 'ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ವಿಧೇಯಕ-2022'ರ ಕರಡನ್ನು ಸಿದ್ಧಪಡಿಸಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಸಲ್ಲಿಸಿದೆ.
ನಾಡಿನಲ್ಲಿ ಕನ್ನಡ ಭಾಷೆ ಉಳಿಸಿ ಬೆಳೆಸುವುದರ ಜೊತೆಗೆ ಅನ್ಯ ಭಾಷೆಗಳ ದಬ್ಬಾಳಿಕೆ ತಗ್ಗಿಸಲು ಜಾರಿಗೆ ತರಲಾಗುತ್ತಿರುವ ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ವಿಧೇಯಕದಿಂದ ರಾಜ್ಯದಲ್ಲಿ ಕನ್ನಡವನ್ನು ಬಲಪಡಿಸಲು ಅನುಕೂಲವಾಗಲಿದೆ. ಈಗಾಗಲೇ ವಿಧೇಯಕದ ಕರಡು ಪ್ರತಿಯನ್ನು ಕಾನೂನು ಆಯೋಗವು ಕಾನೂನು ಇಲಾಖೆ ತಜ್ಞರೊಂದಿಗೆ ವಿಮರ್ಶೆ ಮಾಡಿ ಸಿದ್ಧಪಡಿಸಿದೆ.
ರಾಜ್ಯದಲ್ಲಿ ಕನ್ನಡ ಅಧಿಕೃತ ಭಾಷೆಯಾಗಿದೆ. ನಮ್ಮ ಆಡಳಿತ ಭಾಷೆಯನ್ನು ಅಭಿವೃದ್ಧಿಪಡಿಸಲು ಸರ್ಕಾರ ರಾಜ್ಯಭಾಷಾ ಅಧಿನಿಯಮ -1963 ಮತ್ತು ಸ್ಥಳೀಯ ಪ್ರಾಧಿಕಾರಗಳ ಅಧಿನಿಯಮ-1981 ಜಾರಿಗೆ ತಂದಿದೆ. ಇದರೊಂದಿಗೆ ಕನ್ನಡಕ್ಕೆ ಇನ್ನಷ್ಟು ಪುಷ್ಟಿ ನೀಡುವುದಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ-1994ನ್ನು ಸಹ ರೂಪಿಸಲಾಗಿದೆ. ಹೀಗೆ ಅನೇಕ ಕಾನೂನುಗಳಿದ್ದರೂ ಸೂಕ್ತವಾಗಿ ಕನ್ನಡ ಅನುಷ್ಠಾನ ಆಗದಿರುವ ಹಿನ್ನೆಲೆಯಲ್ಲಿ ಈ ವಿಧೇಯಕದಿಂದ ಕನ್ನಡ ಭಾಷೆಯ ಪುನರುತ್ಥಾನಕ್ಕೆ ಒತ್ತು ನೀಡಿದಂತಾಗಲಿದೆ.
ಕರಡಿನಲ್ಲಿರುವ ಅಂಶಗಳೇನು?:
- ಎಸ್ಎಸ್ಎಲ್ಸಿ, ತತ್ಸಮಾನ ಪರೀಕ್ಷೆಗಳವರೆಗೂ ಕನ್ನಡವನ್ನು ಒಂದು ಭಾಷೆಯಾಗಿ ಕಲಿಯದ ಉನ್ನತ, ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕನ್ನಡ ಭಾಷೆ ಬೋಧನೆ.
- ಉದ್ಯೋಗದಲ್ಲಿ, ನ್ಯಾಯಾಂಗದಲ್ಲಿ, ಸರ್ಕಾರಿ ಅನುದಾನ ಹಾಗೂ ಅನುದಾನರಹಿತ ಸಂಸ್ಥೆಗಳ ಕಾರ್ಯಕ್ರಮದ ಕರಪತ್ರ, ಬ್ಯಾನರ್ಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಕೆ
- ಅಂಗಡಿ ಮಳಿಗೆಗಳು, ಆಸ್ಪತ್ರೆಗಳು, ಕಚೇರಿಗಳು ಸೇರಿದಂತೆ ಎಲ್ಲ ಪ್ರಕಾರದ ನಾಮಫಲಕದಲ್ಲಿ ಕಡ್ಡಾಯವಾಗಿ ಅರ್ಧದಷ್ಟು ಬರಹ ಕನ್ನಡದಲ್ಲಿಯೇ ಇರಬೇಕು.
- 100 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಕೈಗಾರಿಕಾ ಸಂಸ್ಥೆಗಳಲ್ಲಿ ಕನ್ನಡ ಬಾರದವರಿಗೆ ಕನ್ನಡ ಕಲಿಸುವ ಕಾರ್ಯಾಗಾರ ನಡೆಸುವುದು
- ಕನ್ನಡಿಗರಿಗೆ ಮೊದಲ ಪ್ರಾಧಾನ್ಯ ನೀಡುವುದು
- ವಿಧೇಯಕದಲ್ಲಿ ಕನ್ನಡ ಭಾಷೆ ಮತ್ತು ಕನ್ನಡ ನಾಡಿನ ಬಗ್ಗೆ ಕೀಳರಿಮೆ ಮಾಡಿದರೆ ಅಥವಾ ವಿಧೇಯಕದ ಬಗ್ಗೆ ನಿರ್ಲಕ್ಷ್ಯ ತೋರಿದರೆ ತೆರಿಗೆ ವಿನಾಯತಿ, ಧನಸಹಾಯ ಸೇರಿದಂತೆ ಸರ್ಕಾರ ನೀಡುವ ಇತರ ಸೌಲಭ್ಯಗಳನ್ನು ತಡೆ ಹಿಡಿಯುವುದು
- ನಿಯಮಗಳ ಉಲ್ಲಂಘಿಸಿದರೆ ಕಾರಣ ಕೇಳಿ ನೋಟಿಸ್ ನೀಡಲು ಅವಕಾಶವಿರುತ್ತದೆ.
- ತಪ್ಪಿತಸ್ಥರ ವಿರುದ್ಧ ಮೊದಲನೇ ಅಪರಾಧಕ್ಕೆ 5,000 ರೂ., ಎರಡನೆಯ ಅಪರಾಧಕ್ಕೆ 10,000 ರೂ. ನಂತರ ಪ್ರತಿ ಅಪರಾಧಕ್ಕೆ 20,000 ರೂ. ದಂಡ ಪ್ರಸ್ತಾಪ
- ಪರವಾನಗಿ ರದ್ದುಪಡಿಸುವ ಕಠಿಣಕ್ರಮ ಕೈಗೊಳ್ಳಲು ಅವಕಾಶ.
ಇದನ್ನೂ ಓದಿ:ವಾರದೊಳಗೆ ಇಂಗ್ಲಿಷ್ ನಾಮಫಲಕಗಳನ್ನು ತೆರವುಗೊಳಿಸಿ: ಟಿ ಎಸ್ ನಾಗಾಭರಣ ತಾಕೀತು