ಈ ವಿಶೇಷ ನ್ಯಾಯಾಲಯ ರಾಜ್ಯಕ್ಕೊಂದೇ... 17 ಸಾವಿರಕ್ಕೂ ಹೆಚ್ಚು ಪ್ರಕರಣಗಳ ಇತ್ಯರ್ಥ ಯಾವಾಗ? - ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ
ಇಡೀ ರಾಜ್ಯಕ್ಕೆ ಒಂದೇ ವಿಶೇಷ ನ್ಯಾಯಾಲಯ. ರಾಜ್ಯದಲ್ಲಿ ಸುಮಾರು 17,732 ಸರ್ಕಾರಿ ಭೂ ಒತ್ತುವರಿ ಪ್ರಕರಣಗಳು ದಾಖಲು. ಪ್ರಕರಣಗಳ ಇತ್ಯರ್ಥ ವಿಳಂಬ.
ಬೆಂಗಳೂರು: ರಾಜ್ಯದಲ್ಲಿ ಅಕ್ರಮ ಸರ್ಕಾರಿ ಭೂ ಒತ್ತುವರಿ ಪ್ರಕರಣಗಳ ವಿಚಾರಣೆಗೆ ರಾಜ್ಯ ಸರ್ಕಾರ ಈಗಾಗಲೇ ಬೆಂಗಳೂರಿನಲ್ಲಿ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಿದೆ. ಆದರೆ, ಇಡೀ ರಾಜ್ಯಕ್ಕೆ ಇದು ಏಕೈಕ ವಿಶೇಷ ನ್ಯಾಯಾಲಯವಾಗಿದ್ದು, ಪ್ರಕರಣಗಳ ಇತ್ಯರ್ಥ ವಿಳಂಬವಾಗುತ್ತಿದೆ.
ಬೆಂಗಳೂರಲ್ಲಿ 9,294 ಸರ್ಕಾರಿ ಭೂ ಒತ್ತುವರಿ ಪ್ರಕರಣಗಳು ಪತ್ತೆಯಾಗಿದ್ದರೂ, 127 ಪ್ರಕರಣಗಳು ಮಾತ್ರ ದಾಖಲಾಗಿವೆ. ತಹಶೀಲ್ದಾರ್ ಹಾಗೂ ಎಸಿಗಳು ಅಕ್ರಮ ಒತ್ತುವರಿ ಮಾಡಿರುವವರ ವಿರುದ್ಧ ಪ್ರಕರಣ ದಾಖಲಿಸದೇ ಇರುವುದರಿಂದ ಬೆಂಗಳೂರಿನಲ್ಲಿ ಭೂಗಳ್ಳರು ಅಕ್ರಮವಾಗಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದಾರೆ ಎಂಬ ಆಕ್ಷೇಪ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ (ಪಿಎಸಿ) ಸಭೆಯಲ್ಲಿ ವ್ಯಕ್ತವಾಗಿದೆ.