ಕರ್ನಾಟಕ

karnataka

ETV Bharat / city

ರೈತರು ಬೆಳೆ ಕಟಾವು ಬಳಿಕ ಒತ್ತುವರಿ ತೆರವು ಮಾಡಿ: ಹೈಕೋರ್ಟ್ ಸೂಚನೆ - ಬೆಂಗಳೂರು

ರೈತರ ಬೆಳೆ ನಾಶ ಸರಿಕಾಣದು. ಹೀಗಾಗಿ ಒತ್ತುವರಿ ಪ್ರದೇಶದಲ್ಲಿರುವ ಫಸಲನ್ನು ಕಟಾವು ಮಾಡಿದ ಕೂಡಲೇ ಒತ್ತುವರಿ ಸಂಪೂರ್ಣವಾಗಿ ತೆರವುಗೊಳಿಸಬೇಕು ಎಂದು ಅಧಿಕಾರಿಗಳಿಗೆ ಹೈಕೋರ್ಟ್ ಸೂಚನೆ ನೀಡಿದೆ.

high court
ಹೈಕೋರ್ಟ್

By

Published : Nov 10, 2021, 7:50 PM IST

ಬೆಂಗಳೂರು:ಬಳ್ಳಾರಿಯ ಗ್ರಾಮವೊಂದರಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ (Karnataka High Court) ಒತ್ತುವರಿ ಜಾಗದಲ್ಲಿ ರೈತರು ಬೆಳೆದಿರುವ ಫಸಲನ್ನು ಕಟಾವು ಮಾಡಿದ ನಂತರವೇ ಒತ್ತುವರಿ ತೆರವು ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದೆ.

ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಅಡವಿ ಆನಂದದೇವನಹಳ್ಳಿಯಲ್ಲಿ ಕೆಲ ರೈತರು ಮಾಡಿರುವ ಒತ್ತುವರಿಯನ್ನು ತೆರವುಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಗ್ರಾಮದ ಶಿವಣ್ಣ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL)ಯನ್ನು ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಒತ್ತುವರಿ ಮಾಡಿರುವ 19 ಎಕರೆ ಪ್ರದೇಶದಲ್ಲಿ ರೈತರು ಕಬ್ಬು ಹಾಗು ಇತರೆ ಬೆಳೆಗಳನ್ನು ಬೆಳೆದಿದ್ದಾರೆ. ಜಾಗವನ್ನು ಸರ್ವೆ ಮಾಡಿರುವ ಅಧಿಕಾರಿಗಳು ಒತ್ತುವರಿ ತೆರವುಗೊಳಿಸಲು ಮುಂದಾದಾಗ ರೈತರು ಇದಕ್ಕೆ ಅಡ್ಡಿಪಡಿಸಿದ್ದಾರೆ. ಜತೆಗೆ ಕಷ್ಟಪಟ್ಟು ಬೆಳೆದಿರುವ ಬೆಳೆಯನ್ನು ಹಾಳು ಮಾಡಿದರೆ ಆತ್ಮಹತ್ಯೆಗೆ ಮುಂದಾಗುವುದಾಗಿ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಒತ್ತುವರಿ ತೆರವು ಮಾಡಲು ಮೂರು ತಿಂಗಳ ಕಾಲಾವಕಾಶ ನೀಡಬೇಕು ಎಂದು ಕೋರಿದರು.

ಇದಕ್ಕೆ ಸಮ್ಮತಿಸಿದ ಪೀಠ, ಸಂಪೂರ್ಣ ಒತ್ತುವರಿಯನ್ನು ಯಾವುದೇ ಮುಲಾಜಿಲ್ಲದೆ ತೆರವು ಮಾಡಬೇಕು. ಆದರೆ, ರೈತರ ಬೆಳೆ ನಾಶವೂ ಸರಿಕಾಣದು. ಹೀಗಾಗಿ ಒತ್ತುವರಿ ಪ್ರದೇಶದಲ್ಲಿರುವ ಫಸಲನ್ನು ಕಟಾವು ಮಾಡಿದ ಕೂಡಲೇ ಒತ್ತುವರಿ ಸಂಪೂರ್ಣವಾಗಿ ತೆರವುಗೊಳಿಸಬೇಕು. ಮುಂದಿನ ದಿನಗಳಲ್ಲಿ ರೈತರು ಆ ಜಾಗವನ್ನು ಮತ್ತೆ ಒತ್ತುವರಿ ಮಾಡಿ ಬೆಳೆ ಬೆಳೆಯದಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಮುಂದಿನ ಫೆಬ್ರವರಿ ತಿಂಗಳಿಗೆ ಮುಂದೂಡಿತು.

ABOUT THE AUTHOR

...view details