ಬೆಂಗಳೂರು :ಕೊಡಗು ಜಿಲ್ಲೆಯ ಕುಶಾಲನಗರದ ತಾವರೆಕೆರೆ ಒತ್ತುವರಿಯನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್ ಕೂಡಲೇ ಒತ್ತುವರಿ ತೆರವು ತೆರವುಗೊಳಿಸುವ ಸಂಬಂಧ ಕೈಗೊಳ್ಳುವ ಕ್ರಮಗಳ ಕುರಿತು ಪ್ರಮಾಣಪತ್ರ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ತಾವರೆಕೆರೆ ಸುತ್ತಲೂ ಒತ್ತುವರಿ ಮಾಡಿರುವ ಕುರಿತು ನಗರದ ವಕೀಲ ಎನ್.ಪಿ ಅಮೃತೇಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ನ್ಯಾಯಾಲಯದ ಹಿಂದಿನ ನಿರ್ದೇಶನದಂತೆ ಈಗಾಗಲೇ ಕೆರೆ ಪ್ರದೇಶವನ್ನು ಸರ್ವೇ ಮಾಡಲಾಗಿದೆ. ಸರ್ವೆ ವೇಳೆ ಕೆರೆ ಪ್ರದೇಶದಲ್ಲಿ 19 ಒತ್ತುವರಿಗಳು ಕಂಡು ಬಂದಿವೆ. ಈ ಕುರಿತ ವರದಿಯನ್ನು ಶೀಘ್ರವೇ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ವಿವರಿಸಿದರು.
ಹೇಳಿಕೆ ದಾಖಲಿಸಿಕೊಂಡ ಪೀಠ, ಕೆರೆ ಪ್ರದೇಶದ ಸರ್ವೇ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಹಾಗೆಯೇ, ಕೆರೆ ಪ್ರದೇಶದಲ್ಲಿ ನಡೆದಿರುವ 19 ಒತ್ತುವರಿಗಳನ್ನು ತೆರವುಗೊಳಿಸಲು ಕೈಗೊಳ್ಳುವ ಕ್ರಮಗಳ ಕುರಿತು ರಾಜ್ಯ ಸರ್ಕಾರ ಪ್ರಮಾಣಪತ್ರ ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಮುಂದೂಡಿತು.