ಬೆಂಗಳೂರು:ರಾಜ್ಯದ ವಿವಿಧ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಂಧ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಬ್ರೈಲ್ ಪಠ್ಯ ಪುಸ್ತಕಗಳನ್ನು ಇ-ಪಠ್ಯಕ್ಕೆ ಪರಿವರ್ತಿಸುವ ಕಾರ್ಯ ಪೂರೈಸಿಕೊಡುವುದಕ್ಕೆ ಕರೆದಿರುವ ಟೆಂಡರ್ ಅಂತಿಮಗೊಳಿಸಲು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಜೂನ್ವರೆಗೆ ಕಾಲಾವಕಾಶ ನೀಡಿದೆ. ದೃಷ್ಟಿ ವಿಶೇಷ ಚೇತನ ಮಕ್ಕಳಿಗೆ ಪಠ್ಯ ಪುಸ್ತಕಗಳನ್ನು ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ‘ದಿ ನ್ಯಾಷನಲ್ ಫೆಡರೇಷನ್ ಆಫ್ ದಿ ಬ್ಲೈಂಡ್’ ಸಂಸ್ಥೆ ಸಲ್ಲಿಸಿರುವ ಪಿಐಎಲ್ ಅರ್ಜಿಯನ್ನು ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಇಂದು ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಸರ್ವೆ ಮಾಹಿತಿಯಂತೆ ರಾಜ್ಯದಲ್ಲಿ 1,692 ದೃಷ್ಟಿ ವಿಶೇಷ ಚೇತನ ಮಕ್ಕಳು ವಿವಿಧ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸದ್ಯ ಬ್ರೈಲ್ ಲಿಪಿಯ 152 ಪಠ್ಯ ಪುಸ್ತಕಗಳ ಇ-ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಒದಗಿಸಲಾಗಿದೆ. ಉಳಿದಂತೆ ತಮಿಳು, ತೆಲುಗು ಸೇರಿದಂತೆ ಒಟ್ಟು ಏಳು ಭಾಷೆಯಲ್ಲಿ 403 ಪುಸ್ತಕಗಳನ್ನು ಇ-ಪಠ್ಯಕ್ಕೆ ಪರಿವರ್ತಿಸಿ ಅಪ್‌ಲೋಡ್ ಮಾಡಬೇಕಿದೆ ಎಂದು ತಿಳಿಸಿದರು.