ಬೆಂಗಳೂರು: ಆ್ಯಸಿಡ್ ದಾಳಿಯು ಕೇವಲ ವ್ಯಕ್ತಿಯೊಬ್ಬರ ಮೇಲಿನ ಕ್ರೌರ್ಯವಲ್ಲ. ಬದಲಿಗೆ ಅದೊಂದು ಸಮಾಜಘಾತುಕ ಕೃತ್ಯ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಶಿಕ್ಷಕಿಯೊಬ್ಬರ ಮೇಲೆ ಆ್ಯಸಿಡ್ ಎರಚಿದ್ದ ಪಾತಕಿಗೆ ವಿಧಿಸಿದ್ದ 10 ಲಕ್ಷ ರೂಪಾಯಿ ದಂಡ ಹಾಗೂ ಜೀವಾವಧಿ ಶಿಕ್ಷೆಯನ್ನು ಖಾಯಂಗೊಳಿಸಿ ಆದೇಶಿಸಿದೆ.
ಆ್ಯಸಿಡ್ ದಾಳಿ ಪ್ರಕರಣದ ಆರೋಪಿ ಮಹೇಶ್ ಎಂಬಾತ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ. ವೀರಪ್ಪ ಹಾಗೂ ನ್ಯಾ. ವಿ. ಶ್ರೀಶಾನಂದ್ ಅವರಿದ್ದ ವಿಭಾಗೀಯ ಪೀಠ, ಇಂತಹ ಹೇಯ ಕೃತ್ಯಗಳನ್ನು ನೋಡಿಯೂ ನ್ಯಾಯಾಲಯಗಳು ಕಣ್ಣುಮುಚ್ಚಿ ಕೂರಲು ಸಾಧ್ಯವಿಲ್ಲ. ಮೃಗೀಯ ಕೃತ್ಯಗಳನ್ನು ಹತ್ತಿಕ್ಕಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು 68 ಪುಟಗಳ ಸುದೀರ್ಘ ತೀರ್ಪಿನಲ್ಲಿ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ತೀರ್ಪಿನ ವಿವರ:
ಆ್ಯಸಿಡ್ ದಾಳಿ ಪ್ರಕರಣಗಳಿಂದ ವಿಶ್ವವೇ ತತ್ತರಿಸುತ್ತಿದೆ. ಇಂತಹ ಘೋರ ಕೃತ್ಯಗಳನ್ನು ತಡೆಗಟ್ಟಲು ಹಲವು ದೇಶಗಳು ಪ್ರಯತ್ನಿಸುತ್ತಿವೆ. ಸಾಮಾನ್ಯವಾಗಿ ಮದುವೆ ಅಥವಾ ಪ್ರೀತಿ ಪ್ರಸ್ತಾವವನ್ನು ತಿರಸ್ಕರಿಸಿದ ಸಣ್ಣ ವಯಸ್ಸಿನವರೇ ಆ್ಯಸಿಡ್ ದಾಳಿಗೆ ಒಳಗಾಗುತ್ತಿದ್ದಾರೆ. ದ್ವೇಷ ಅಥವಾ ಸೇಡು ತೀರಿಸಿಕೊಳ್ಳಲು ಆ್ಯಸಿಡ್ ದಾಳಿ ನಡೆಸುತ್ತಿದ್ದಾರೆ. ಆ್ಯಸಿಡ್ ದಾಳಿಗಳಲ್ಲಿ ಸಾಮಾನ್ಯವಾಗಿ ಸಾವುಗಳು ಕಡಿಮೆ. ಆದರೆ ತೀವ್ರತರನಾದ ದೈಹಿಕ ಹಾನಿ ಉಂಟಾಗುತ್ತದೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ವಿರುದ್ಧದ ಕ್ರೌರ್ಯಗಳಲ್ಲಿ ಇದೂ ಒಂದಾಗಿದೆ.
ಅಲ್ಲದೇ, ಆ್ಯಸಿಡ್ ದಾಳಿಯಿಂದ ಸಂತ್ರಸ್ತರು ದೀರ್ಘ ಕಾಲದ ಸಾಮಾಜಿಕ-ಆರ್ಥಿಕ ದುಷ್ಪರಿಣಾಮಗಳನ್ನು ಎದುರಿಸುತ್ತಿದ್ದಾರೆ. ದಾಳಿಯಿಂದ ಮಹಿಳೆಯರು ತಮ್ಮ ನೈಜ ರೂಪ ಕಳೆದುಕೊಳ್ಳುವ ಜೊತೆಗೆ ಮಾನಸಿಕ ಘಾಸಿಗೆ ಒಳಗಾಗುತ್ತಾರೆ. ಅಷ್ಟೇ ಅಲ್ಲ, ಇಂತಹ ಮಹಿಳೆಯರನ್ನು ಸಮಾಜವೂ ಕೀಳಾಗಿ ಕಾಣುತ್ತದೆ. ಬಹುತೇಕರಿಗೆ ಸೂಕ್ತ ಉದ್ಯೋಗವೂ ಸಿಗುವುದಿಲ್ಲ. ದಾಳಿ ತೀವ್ರವಿದ್ದಾಗ ವಿಕಲಾಂಗರೂ ಆಗಿದ್ದಾರೆ. ಹೀಗಾಗಿ ಆ್ಯಸಿಡ್ ದಾಳಿ ಎಂಬುದು ಕೇವಲ ವ್ಯಕ್ತಿಯೊಬ್ಬರ ಮೇಲಿನ ಕ್ರೌರ್ಯವಲ್ಲ. ಸಮಾಜಘಾತುಕ ಕೃತ್ಯ ಎಂದು ದೌರ್ಜನ್ಯದ ಕುರಿತು ವಿಶ್ಲೇಷಿಸಿದೆ.
ಪ್ರಕರಣದ ಹಿನ್ನೆಲೆ :
ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕೋಣನತಲೆ ಗ್ರಾಮದ ಮಹೇಶ್ ಸ್ವಗ್ರಾಮದ ಯುವತಿ ಎದುರು ಮದುವೆ ಪ್ರಸ್ತಾಪವಿಟ್ಟಿದ್ದ. ಇದಕ್ಕೆ ಯುವತಿ ಪೋಷಕರು ಒಪ್ಪದ ಹಿನ್ನೆಲೆಯಲ್ಲಿ ದ್ವೇಷ ಬೆಳೆಸಿಕೊಂಡು ಆಕೆಯನ್ನು ಬೇರೆ ಯಾರೂ ಮದುವೆ ಆಗಬಾರದೆಂದು ತೀರ್ಮಾನಿಸಿದ್ದ. ಆ ಪ್ರಕಾರ 2014ರ ಜನವರಿ 31ರ ಸಂಜೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವತಿ ಮೇಲೆ ಆ್ಯಸಿಡ್ ಎರಚಿ ಬೈಕ್ನಲ್ಲಿ ಪರಾರಿಯಾಗಿದ್ದ. ಘಟನೆಯಲ್ಲಿ ಯುವತಿಯಷ್ಟೇ ಅಲ್ಲದೆ ಬಾಲಕ ರಘು ಕೂಡ ಗಾಯಗೊಂಡಿದ್ದ. ಘಟನೆ ಸಂಬಂಧ ಎಫ್ಐಆರ್ ದಾಖಲಿಸಿಕೊಂಡಿದ್ದ ಮಲೆಬೆನ್ನೂರು ಠಾಣೆ ಪೊಲೀಸರು, ಆರೋಪಿ ವಿರುದ್ಧ ದೋಷಾರೋಪಣೆ ಸಲ್ಲಿಸಿದ್ದರು. ದಾವಣಗೆರೆಯ ಎರಡನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ಕೋರ್ಟ್ ಆರೋಪಿ ಮಹೇಶನಿಗೆ 10 ಲಕ್ಷ ದಂಡ ಹಾಗೂ ಜೀವಾವಧಿ ಶಿಕ್ಷೆ ವಿಸಿಧಿ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಆರೋಪಿ, ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದ.
ಯುವತಿ ಚಿಕಿತ್ಸೆಗೆ ಹೆಚ್ಚಿನ ಪರಿಹಾರ :
ಆ್ಯಸಿಡ್ ದಾಳಿಗೆ ಒಳಗಾದ ಯುವತಿಗೆ ಪರಿಹಾರ ನೀಡುವಂತೆ ಆರೋಪಿಗೆ 10 ಲಕ್ಷ ದಂಡ ವಿಧಿಸಿರುವ ಪೀಠ, ಸಂತ್ರಸ್ತೆಗೆ ಮತ್ತಷ್ಟು ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶಿಸಿದೆ. ಸಂತ್ರಸ್ತೆ ವಯಸ್ಸು ಚಿಕ್ಕದಿರುವುದರಿಂದ ಅವರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳಬಹುದು, ಅದಕ್ಕೆ ಖರ್ಚಾಗುವ ವೆಚ್ಚವನ್ನು ಪರಿಗಣಿಸಿ ಸೂಕ್ತ ಪರಿಹಾರ ನಿಗದಿಪಡಿಸುವಂತೆ ಪ್ರಾಧಿಕಾರಕ್ಕೆ ಸೂಚಿಸಿದೆ. ಹೈಕೋರ್ಟ್ ತೀರ್ಪಿನಿಂದಾಗಿ ಸಂತ್ರಸ್ತೆಯ ಪ್ಲಾಸ್ಟಿಕ್ ಸರ್ಜರಿ ಚಿಕಿತ್ಸೆಗೂ ನೆರವು ಸಿಕ್ಕಂತಾಗಿದೆ.