ಬೆಂಗಳೂರು: Norovirus.. ಕೋವಿಡ್-19 ವೈರಸ್ ಮಾರಣಾಂತಿಕ ಕಾಯಿಲೆ ಮಧ್ಯೆಯೇ ನೆರೆಯ ರಾಜ್ಯ ಕೇರಳದಲ್ಲಿ ನೋರೋ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಎಚ್ಚರ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಕೇರಳ ರಾಜ್ಯದ ವಯನಾಡಿನಲ್ಲಿ 13 ಜನರಲ್ಲಿ ನೋರೋ ವೈರಸ್ ಕಾಣಿಸಿಕೊಂಡಿದ್ದು, ರಾಜ್ಯದಲ್ಲೂ ಕೂಡ ನೋರೋ ವೈರಸ್ ಕುರಿತು ಕಟ್ಟೆಚ್ಚರ ವಹಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚನೆ ನೀಡಿದೆ. ಮುಖ್ಯವಾಗಿ ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯಲ್ಲಿ ಮುಂಜಾಗ್ರತೆ ವಹಿಸುವಂತೆ ಸೂಚಿಸಿದೆ.
ಈ ಸೋಂಕು ಸಾಮಾನ್ಯವಾಗಿ ಕಲುಷಿತ ಆಹಾರ ಮತ್ತು ನೀರಿನಿಂದ ಹರಡುತ್ತದೆ. ಇದರಿಂದ ವಾಂತಿ, ಭೇದಿ, ವಾಕರಿಕೆ ಮತ್ತು ಹೊಟ್ಟೆ ನೋವು , ತಲೆನೋವು, ಮೈ ಕೈ ನೋವು ಮತ್ತು ಜ್ವರದಂತಹ ಸಾಧಾರಣ ಲಕ್ಷಣಗಳು ಕಂಡುಬರುತ್ತದೆ. ಹೀಗಾಗಿ, ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆಗೊಳಿಸಿದ್ದು, ಕೇರಳ ರಾಜ್ಯದ ಗಡಿ ಜಿಲ್ಲೆಗಳಲ್ಲಿ ಅನುಸರಿಸಬೇಕಾದ ಕೆಲವು ಮುಂಜಾಗ್ರತಾ ಕ್ರಮಗಳು ಹೀಗಿವೆ.
1.Norovirus: ನೋರೋ ವೈರಸ್ ಸೋಂಕು ಕಾಲರಾದಂತೆ ತೀವ್ರ ಅತಿಸಾರ ಹಾಗೂ ತೀವ್ರ ನಿರ್ಜಲೀಕರಣವಾಗುತ್ತದೆ. ತಕ್ಷಣ ಆಸ್ಪತ್ರೆಗೆ ನೊಂದಾಯಿಸುವುದು ಮತ್ತು ಅತಿಸಾರ ಭೇದಿಗೆ ನೀಡಲಾಗುವ ಚಿಕಿತ್ಸೆಯನ್ನು ನೀಡಬೇಕು, ಇಲ್ಲದಿದ್ದಲ್ಲಿ ಮಾರಣಾಂತಿಕವಾಗಲಿದೆ.
2. ಈ ವೈರಸ್‌ಗೆ ಚಿಕಿತ್ಸೆ 'ನಾನ್ ಸ್ಪೆಸಿಪಿಕ್' ಆಗಿದ್ದು, ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಬೇಕು.
3. ಜಿಲ್ಲೆಗೆ ಒಬ್ಬ 'ಫಿಸಿಷಿಯನ್' ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿ, ಸೂಕ್ತ ನಿರ್ವಹಣೆ ಮಾಡಲು ತಿಳಿಸುವುದು. ಸದರಿಯವರ ಹೆಸರು ಮತ್ತು ದೂರವಾಣಿಗಳನ್ನು ಸಹ ನಿರ್ದೇಶಕರ ಗಮನಕ್ಕೆ ತರುವುದು.
4. ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿಗಳು ಈ ಸೋಂಕಿನ ನಿರ್ವಹಣೆಯ ಸಂಪೂರ್ಣ ಜವಾಬ್ದಾರರಾಗಿರುತ್ತಾರೆ.
5. ಎಲ್ಲ ಕುಡಿಯುವ ನೀರಿನ ಮೂಲಗಳ ಮಾಹಿತಿಯನ್ನು ಕಲೆ ಹಾಕುವುದು ಹಾಗೂ ಎಲ್ಲ ಮೂಲಗಳಿಂದ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸುವುದು.