ಬೆಂಗಳೂರು:ರಾಜ್ಯದ ಜನರ ಆರೋಗ್ಯದ ದೃಷ್ಟಿಯಿಂದ ಪಡಿತರ ವ್ಯವಸ್ಥೆಯಡಿ ಅಕ್ಕಿ ಜೊತೆ ಸಿರಿಧಾನ್ಯ, ಜೋಳ ಮತ್ತು ರಾಗಿಯನ್ನು ಸಮಪ್ರಮಾಣದಲ್ಲಿ ವಿತರಿಸಲು ಸರ್ಕಾರ ಚಿಂತನೆ ನಡೆಸಿದೆ. ರಾಜ್ಯ ಸರ್ಕಾರ ಪಡಿತರ ಚೀಟಿದಾರರಿಗೆ ಅಕ್ಕಿ, ಗೋಧಿ ಇಲ್ಲವೇ ರಾಗಿ ನೀಡುತ್ತಿದ್ದು, ಅದೇ ಕಾಲಕ್ಕೆ ಕೋವಿಡ್ ಕಾಲದಲ್ಲಿ ಪ್ರಧಾನಮಂತ್ರಿಗಳ ಗರೀಬ್ ಕಲ್ಯಾಣ ಯೋಜನೆಯಡಿ ಐದು ಕೆಜಿ ಅಕ್ಕಿ ಒದಗಿಸುವ ಕೆಲಸವನ್ನು ಮುಂದುವರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಹೀಗಾಗಿ ರಾಜ್ಯ ಸರ್ಕಾರ ಒದಗಿಸುವ ಅಕ್ಕಿ, ಗೋಧಿ ಇಲ್ಲವೇ ರಾಗಿಯ ಜೊತೆಗೆ ಪ್ರಧಾನಮಂತ್ರಿಗಳ ಗರೀಬ್ ಕಲ್ಯಾಣ ಯೋಜನೆಯಡಿ ನೀಡುವ ಅಕ್ಕಿಯ ಲಾಭವೂ ಜನರಿಗಾಗಲಿದೆ. ಈ ಹಿನ್ನೆಲೆಯಲ್ಲಿ ಅಕ್ಕಿಯ ಜೊತೆ ರಾಗಿ, ಜೋಳ ಮತ್ತು ಸಿರಿಧಾನ್ಯಗಳನ್ನು ಸಮಪ್ರಮಾಣದಲ್ಲಿ ನೀಡುವುದು ಸರ್ಕಾರದ ಯೋಚನೆಯಾಗಿದೆ. ಕೋವಿಡ್ ನಂತರದ ಕಾಲದಲ್ಲಿ ಜನರ ಆರೋಗ್ಯ ಪರಿಸ್ಥಿತಿಯ ಮೇಲೆ ಹೆಚ್ಚಿನ ನಿಗಾ ಇಡುವ ಅಗತ್ಯವಿದ್ದು, ಪಡಿತರ ಯೋಜನೆಗಳನ್ನು ಕ್ರಮ ಬದ್ಧಗೊಳಿಸಿ ಜನರಿಗೆ ಸಿರಿಧಾನ್ಯ, ಜೋಳವನ್ನು ಒದಗಿಸುವುದು ಒಳ್ಳೆಯದು ಎಂಬುದು ತಜ್ಞರ ಸಲಹೆಯಾಗಿದೆ.
ಸಿರಿಧಾನ್ಯ ನೀಡಲು ತಜ್ಞರ ಸಲಹೆ:ಹಳೆ ಮೈಸೂರು ಭಾಗದಲ್ಲಿ ಅಕ್ಕಿಯ ಜೊತೆ ರಾಗಿ ಮಾತ್ರವಲ್ಲದೇ ಸಜ್ಜೆ, ನವಣೆ ಸೇರಿದಂತೆ ಸಿರಿಧಾನ್ಯಗಳನ್ನು ನೀಡುವುದು ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಅಕ್ಕಿ, ಗೋಧಿ ಜೊತೆ ಜೋಳ ಒದಗಿಸುವುದು ಸೂಕ್ತ ಎಂಬುದು ತಜ್ಞರ ಅಭಿಪ್ರಾಯ. ರಾಜ್ಯ ಸರ್ಕಾರ ಒದಗಿಸುವ ಅಕ್ಕಿ, ಕೇಂದ್ರದ ಆಹಾರ ಭದ್ರತಾ ಯೋಜನೆಯಡಿ ಒದಗಿಸಲಾಗುತ್ತಿರುವ ಅಕ್ಕಿ ಬಹುತೇಕ ಕುಟುಂಬಗಳಿಗೆ ಹೆಚ್ಚಾಗಲಿದ್ದು, ದೊಡ್ಡ ಪ್ರಮಾಣದಲ್ಲಿ ಅಕ್ಕಿ ನೀಡುವ ಬದಲು ರಾಗಿ, ಜೋಳ ಮತ್ತು ಸಿರಿಧಾನ್ಯಗಳನ್ನು ಬಯಸುತ್ತಾರೆ. ಹಾಗಾಗಿ, ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಇಂತಹ ಪಡಿತರ ಪದ್ಧತಿಯಲ್ಲಿ ಬದಲಾವಣೆ ಮಾಡಬೇಕು ಎಂದು ತಜ್ಞರು ರಾಜ್ಯ ಸರ್ಕಾರಕ್ಕೆ ವರದಿ ನೀಡಿದ್ದು, ಈ ವರದಿಯನ್ನು ಜಾರಿಗೊಳಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ.