ಬೆಂಗಳೂರು :ರಾಜ್ಯ ಸರ್ಕಾರ ಮನೆ ಕಳೆದುಕೊಂಡ ನೆರೆ ಸಂತ್ರಸ್ತರ ನೆರವಿಗೆ ಬರುವಲ್ಲಿ ವಿಫಲವಾಗಿದೆ. ರಾಜ್ಯದಲ್ಲಿ 2019, 2020, 2021ರಲ್ಲಿ ನಿರಂತರವಾಗಿ ಮಳೆ ಅಬ್ಬರಿಸಿತ್ತು. ಈ ವೇಳೆ ಸಾವಿರಾರು ಮಂದಿ ಮನೆ-ಮಠ ಕಳೆದುಕೊಂಡು ಸಂತ್ರಸ್ತರಾಗಿದ್ದರು. ಈ ಸಂದರ್ಭ ರಾಜ್ಯ ಸರ್ಕಾರ ಮನೆ ಕಳಕೊಂಡವರಿಗೆ ಕೂಡಲೇ ಸೂರು ಕಲ್ಪಿಸಿಕೊಡುವುದಾಗಿ ಭರವಸೆ ನೀಡಿತ್ತು. ಈ ಸಂಬಂಧ ಪುನರ್ವಸತಿ ಯೋಜನೆಯನ್ನೂ ರೂಪಿಸಿತ್ತು. ಆದರೆ, ಮನೆ ಕಳಕೊಂಡು ಮೂರು ವರ್ಷ ಕಳೆದರೂ ರಾಜ್ಯ ಸರ್ಕಾರಕ್ಕೆ ಸೂರು ಕಲ್ಪಿಸಲು ಸಾಧ್ಯವಾಗಿಲ್ಲ.
ಎಡವಿದ ಸರ್ಕಾರ : 2019ರಲ್ಲಿ ರಾಜ್ಯಾದ್ಯಂತ ಸುರಿದ ಅತಿವೃಷ್ಠಿ, ಭೀಕರ ಪ್ರವಾಹದಿಂದ ಮನೆ ಕಳೆದುಕೊಂಡ ಹಲವರಿಗೆ ಇನ್ನೂ ಸೂರು ಸಿಕ್ಕಿಲ್ಲ. ವಸತಿ ಇಲಾಖೆಯಿಂದ ಲಭ್ಯವಾದ ಅಂಕಿ-ಅಂಶದಂತೆ ಸರ್ಕಾರಕ್ಕೆ ಇನ್ನೂ ಮನೆ ನಿರ್ಮಾಣ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ರಾಜ್ಯ ಸರ್ಕಾರ ಅಂದು ಮನೆ ಕಳಕೊಂಡವರನ್ನು ಪುನರ್ವಸತಿ ಯೋಜನೆಯಡಿ ಎ, ಬಿ3, ಬಿ1, ಸಿ-ವರ್ಗಗಳಾಗಿ ವಿಂಗಡಿಸಿತ್ತು. ಅದರಂತೆ ಎ ವರ್ಗಕ್ಕೆ 5 ಲಕ್ಷ ರೂ., ಬಿ2 ವರ್ಗಕ್ಕೆ 5 ಲಕ್ಷ ರೂ., ಬಿ1 ವರ್ಗಕ್ಕೆ 3 ಲಕ್ಷ ರೂ., ಸಿ ವರ್ಗಕ್ಕೆ 50 ಸಾವಿರ ರೂ., ಅನಧಿಕೃತ ಕಟ್ಟಡಕ್ಕೆ 1 ಲಕ್ಷ ರೂ. ಮತ್ತು ಬಿ ವರ್ಗದ ಕಟ್ಟಡಗಳಿಗೆ ಪುನರ್ವಸತಿ ಯೋಜನೆ ರೂಪಿಸಲಾಗಿತ್ತು.
2019ರಲ್ಲಿ ನೆರೆ ಮತ್ತು ಪ್ರವಾಹದಿಂದ 1,27,336 ಮನೆಗಳಿಗೆ ಪುನರ್ವಸತಿ ಯೋಜನೆಗೆ ಡಿಸಿಗಳು ಅನುಮೋದನೆ ನೀಡಿದ್ದರು. ಅದರಲ್ಲಿ ಈವರೆಗೆ ದುರಸ್ತಿ ಹಾಗೂ ಪೂರ್ಣಗೊಂಡಿರುವುದು 1,12,972 ಮನೆಗಳು. ಇನ್ನೂ ನಿರ್ಮಾಣ ಹಂತದಲ್ಲಿ 10,462 ಮನೆಗಳಿವೆ. 7,164 ಮನೆಗಳು ಇನ್ನು ಪ್ರಾರಂಭವೇ ಆಗಿಲ್ಲ. 5,078 ಮನೆಗಳನ್ನು ಡಿಸಿಗಳು ಬ್ಲಾಕ್ ಮಾಡಿದ್ದಾರೆ. ಆ ಮೂಲಕ ಪ್ರಾರಂಭವಾಗದ ಮತ್ತು ಬ್ಲಾಕ್ ಎರಡು ಸೇರಿ 12,242 ಮನೆಗಳು ಬಾಕಿ ಇವೆ.
2020ರ ನೆರೆ ಸಂತ್ರಸ್ತರಿಗೂ ದಕ್ಕದ ಮನೆ :2020ರ ನೆರೆ ಸಂತ್ರಸ್ತರಿಗೂ ಪುನರ್ವಸತಿ ನೀಡುವಲ್ಲಿ ಬಿಜೆಪಿ ಸರ್ಕಾರ ಎಡವಿದೆ. ಎ, ಬಿ, ಬಿ1, ಬಿ2, ಸಿ ವರ್ಗಗಳ ಅಡಿಯಲ್ಲಿ 39,172 ಮನೆಗಳಿಗೆ ಡಿಸಿಗಳು ಅನುಮೋದನೆ ನೀಡಿದ್ದರು. ಆದರೆ, ಈವರೆಗೆ 6,556 ಮನೆಗಳು ಮಾತ್ರ ದುರಸ್ಥಿಯಾಗಿ ಪೂರ್ಣಗೊಂಡಿವೆ. ಇನ್ನೂ 4,910 ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ದುರಂತ ಅಂದರೆ 26,061 ಮನೆಗಳು ನಿರ್ಮಾಣ, ದುರಸ್ಥಿ ಕಾರ್ಯ ಆರಂಭವೇ ಆಗಿಲ್ಲ. ಈ ಪೈಕಿ ಬ್ಲಾಕ್ ಆದ ಮನೆಗಳ ಸಂಖ್ಯೆ 1421 ಆಗಿದೆ.