ಬೆಂಗಳೂರು:ಹಲವು ಕಾರಣಗಳಿಂದನಷ್ಟದಲ್ಲಿದ್ದ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಮೇಲೆ ಕಳೆದ ವರ್ಷ ಬಂದಪ್ಪಳಿಸಿದ ಕೋವಿಡ್ ಬಿರುಗಾಳಿ ಸಂಸ್ಥೆಗೆ ಮತ್ತಷ್ಟು ಹೊಡೆತ ನೀಡಿತು. ಪರಿಣಾಮ, ನಿರೀಕ್ಷಿತ ಆದಾಯ ಬಾರದೇ ಸಂಸ್ಥೆ ತನ್ನ ಸಿಬ್ಬಂದಿಗೆ ತಿಂಗಳ ವೇತನ ನೀಡಲು ಸಹ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಒಂದು ಇಡೀ ವರ್ಷದ ಸಾರಿಗೆ ನೌಕರರ ವೇತನ ನಿರ್ವಹಣೆಯನ್ನು ಸರ್ಕಾರದ ಅನುದಾನದಲ್ಲೇ ನೀಡುತ್ತಿದೆ.
ತಿಂಗಳು ಪೂರ್ತಿ ಕೆಲಸ ಮಾಡಿದರೂ ಪೂರ್ಣ ಸಂಬಳದ ಬದಲಿಗೆ ಅರ್ಧ ಸಂಬಳ ಪಡೆಯುವ ಪರಿಸ್ಥಿತಿ ಸಾರಿಗೆ ಸಿಬ್ಬಂದಿಯದ್ದಾಗಿದೆ. ಕಳೆದ ಆಗಸ್ಟ್ ತಿಂಗಳ ಅರ್ಧ ಸಂಬಳವನ್ನು ಸರ್ಕಾರ ಇಂದು ಬಿಡುಗಡೆ ಮಾಡಿದೆ. ಕೆಎಸ್ಆರ್ಟಿಸಿ, ಬಿಎಂಟಿಸಿ, ವಾಯುವ್ಯ ಹಾಗೂ ಕಲ್ಯಾಣ ಸಾರಿಗೆ ಆಗಸ್ಟ್ ತಿಂಗಳ ಬಾಕಿ ಮೊತ್ತ ಬಿಡುಗಡೆ ಮಾಡಿ ಸರ್ಕಾರ ಆದೇಶಿಸಿದೆ. ಈ ನಾಲ್ಕು ಸಾರಿಗೆ ನಿಗಮಗಳಿಗೆ ಆಗಸ್ಟ್ ತಿಂಗಳ ಬಾಕಿ ಸಂಬಳ 171 ಕೋಟಿ ರೂ ಹಣ ಬಿಡುಗಡೆ ಮಾಡಿದೆ.