ಬೆಂಗಳೂರು: ಗ್ರೀಸ್ ದೇಶಕ್ಕೆ ಮಧುಚಂದ್ರಕ್ಕೆ ತೆರಳಿದ್ದ 26 ವರ್ಷದ ಯುವಕ ರಾಜ್ಯದ ಐದನೇ ಕೊರೊನಾ ಪೀಡಿತ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಮಾಹಿತಿ ನೀಡಿದ್ದಾರೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸುದ್ದಿಗೋಷ್ಟಿ ವಿಧಾನಸೌಧದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಗ್ರೀಸ್ ದೇಶದಿಂದ ವಾಪಸ್ ಬಂದಿರುವ ವ್ಯಕ್ತಿ ನೇರವಾಗಿ ಬೆಂಗಳೂರಿಗೆ ಆಗಮಿಸಿದ್ದ. ಅವರ ಪತ್ನಿ ಆಗ್ರಾದಲ್ಲಿದ್ದು ಅಲ್ಲಿನ ಸರ್ಕಾರಕ್ಕೆ ವಿವರ ನೀಡಿದ್ದೇವೆ. ಅವರ ಪತ್ನಿಯನ್ನೂ ಪರೀಕ್ಷೆಗೆ ಒಳಪಡಿಸುತ್ತೇವೆ. ರೋಗಿ ಬೆಂಗಳೂರಿನ ತನ್ನ ಕಚೇರಿಗೆ ಕೇವಲ ಒಂದು ಗಂಟೆಗೆ ಭೇಟಿ ಕೊಟ್ಟಿದ್ದ, ಆಗ ನಾಲ್ಕೈದು ಮಂದಿಯ ಜತೆ ಮಾತನಾಡಿದ್ದಾನೆ. ಆತ ಸಂಪರ್ಕಿಸಿದ ಎಲ್ಲಾ ವ್ಯಕ್ತಿಗಳನ್ನೂ ಪರೀಕ್ಷೆಗೆ ಒಳಪಡಿಸಿದ್ದೇವೆ. ಆತನ ಆರೋಗ್ಯ ಸ್ಥಿರವಾಗಿದೆ. ಪ್ರತ್ಯೇಕವಾಗಿರಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಪ್ರಾಥಮಿಕ ಸಂಪರ್ಕದಲ್ಲಿರುವವರನ್ನು ತಪಾಸಣೆಗೆ ಒಳಪಡಿಸಿದ್ದು, ಅವರೆಲ್ಲರಿಗೂ ಯಾವುದೇ ಲಕ್ಷಣಗಳಿಲ್ಲ. ಆದರೂ ಅವರನ್ನು ಮನೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
17 ಮಂದಿ ಇವರ ಸಂಪರ್ಕಕ್ಕೆ ಬಂದಿದ್ದರು. 10 ಮಂದಿ ಮೊದಲ ಸಂಪರ್ಕದಲ್ಲಿದ್ದರೆ, ಉಳಿದವರು ಎರಡನೇ ಸಂಪರ್ಕದವರಾಗಿದ್ದಾರೆ. ಕಲಬುರುಗಿ ವೃದ್ಧನ ಸಾವು ನಿಜ. ಆದರೆ ಅದು ಕೋವಿಡ್ ಅಲ್ಲ, ಮೃತ ವ್ಯಕ್ತಿ ಮೆಕ್ಕಾ, ಮದಿನಾ ಪ್ರವಾಸ ಮುಗಿಸಿ ಸೌದಿಯಿಂದ ವಾಪಸಾಗಿದ್ದರು. ಅನಾರೋಗ್ಯಕ್ಕೆ ಒಳಗಾದ ಹಿನ್ನೆಲೆ ಹೈದ್ರಾಬಾದ್ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದರು. ಅವರ ಆರೋಗ್ಯ ವರದಿ ಇಷ್ಟರಲ್ಲೇ ಕೈಸೇರಲಿದೆ ಎಂದು ಸಚಿವರು ತಿಳಿಸಿದರು.
ಶಾಲೆಗಳಿಗೆ ರಜೆ ನೀಡಿದ್ದೇವೆ. ಸಮಸ್ಯೆ ಏನೇ ಇದ್ದರೂ ನಿವಾರಿಸೋಣ, ಮುಂದುವರಿದ ರಾಷ್ಟ್ರಗಳಲ್ಲಿ ಅನುಸರಿಸುವ ತಂತ್ರಜ್ಞಾನವನ್ನು ಬಳಸೋಣ, ಸಮ ವಾತಾವರಣ ಹೊಂದಿರುವ ರಾಷ್ಟ್ರಗಳು ಅನುಸರಿಸಿರುವ ಪರಿಹಾರ ಮಾರ್ಗವನ್ನೇ ಇಲ್ಲಿ ಬಳಸುತ್ತೇವೆ. ವಿದೇಶಗಳಿಗೆ ಭಾರತದಿಂದ ತೆರಳುವುದನ್ನು ಬುಧವಾರದಿಂದಲೇ ನಿಷೇಧಿಸಿದ್ದೇವೆ. ಹೊರ ದೇಶಕ್ಕೆ ತೆರಳಿರುವ ವ್ಯಕ್ತಿಗಳ ವಿವರವನ್ನು ಕೇಳಿದ್ದೇವೆ. ಕುಟುಂಬ ಸದಸ್ಯರಿಂದ ಮಾಹಿತಿ ಸಿಕ್ಕ ತಕ್ಷಣ ವಿವರ ಒದಗಿಸುತ್ತೇವೆ. ದಾಖಲಾದ ಎಲ್ಲಾ ನಾಲ್ವರು ರೋಗಿಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಮೂವರೂ ಕುಟುಂಬ ಸದಸ್ಯರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಮೊದಲ ದಿನ ದಾಖಲಾದ ರೋಗಿಗೆ ಮಧುಮೇಹ ಸಮಸ್ಯೆ ಇದೆ. ಅವರೂ ಚಿಕಿತ್ಸೆ ಮೂಲಕ ಗುಣಮುಖವಾಗಲಿದ್ದಾರೆ. ಹುಶಾರಾಗುವ ವಿಶ್ವಾಸ ಇದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರು ಹೇಳಿದರು.