ಕರ್ನಾಟಕ

karnataka

ETV Bharat / city

ರಾಜ್ಯದಲ್ಲಿ 2 ಹಂತಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ: ಆಯೋಗದ ಘೋಷಣೆ - Karnataka Gram Panchayat election news

ರಾಜ್ಯದಲ್ಲಿ 2 ಹಂತಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ
ರಾಜ್ಯ ಚುನಾವಣಾ ಆಯುಕ್ತ ಡಾ.ಬಿ.ಬಸವರಾಜು ಸುದ್ದಿಗೋಷ್ಠಿ

By

Published : Nov 30, 2020, 11:51 AM IST

Updated : Nov 30, 2020, 6:58 PM IST

11:50 November 30

ತಕ್ಷಣದಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿ

ರಾಜ್ಯ ಚುನಾವಣಾ ಆಯುಕ್ತ ಡಾ.ಬಿ.ಬಸವರಾಜು ಸುದ್ದಿಗೋಷ್ಠಿ

ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯತಿ ಚುನಾವಣೆಗೆ ಎರಡು ಹಂತದಲ್ಲಿ ದಿನಾಂಕ ನಿಗದಿಯಾಗಿದೆ. ರಾಜ್ಯದ 30 ಜಿಲ್ಲೆಗಳಲ್ಲೂ ಎರಡು ಹಂತಗಳಲ್ಲಿ ಒಟ್ಟು 5762 ಗ್ರಾಮ ಪಂಚಾಯತಿಗಳಿಗೆ ಡಿಸೆಂಬರ್ 22 ಮತ್ತು 27 ರಂದು ಚುನಾವಣೆ ನಡೆಯಲಿದೆ.

ವರ್ಚುವಲ್ ಮೂಲಕ ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಬಿ.ಬಸವರಾಜು, ರಾಜ್ಯದ 30 ಜಿಲ್ಲೆಗಳಲ್ಲೂ ಗ್ರಾಮ ಪಂಚಾಯತಿ ಚುನಾವಣೆ ನಡೆಯಲಿದ್ದು, ಮೊದಲ ಹಂತದ ಮತದಾನ ಡಿಸೆಂಬರ್ 22 ಹಾಗೂ ಎರಡನೇ ಹಂತದ ಮತದಾನ ಡಿಸೆಂಬರ್ 27 ರಂದು ನಡೆಯಲಿದೆ.

ಮೊದಲ ಹಂತದ ಚುನಾವಣೆ ನಡೆಯುವ ಜಿಲ್ಲೆಗಳಲ್ಲಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಡಿಸೆಂಬರ್ 7 ರಂದು ಅಧಿಸೂಚನೆ ಹೊರಡಿಸುತ್ತಾರೆ. ಅದೇ ರೀತಿ ಎರಡನೇ ಹಂತದ ಚುನಾವಣೆ ನಡೆಯುವ ಜಿಲ್ಲೆಗಳಲ್ಲಿ ಡಿಸೆಂಬರ್ 11 ರಂದು ಅಧಿಸೂಚನೆ ಹೊರಡಿಸಲಿದ್ದಾರೆ ಎಂದು ತಿಳಿಸಿದರು.

ಅಂದಿನಿಂದಲೇ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಡಿಸೆಂಬರ್ 11 ಕಡೆಯ ದಿನವಾಗಿದೆ. ಡಿಸೆಂಬರ್ 12 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ವಾಪಸ್ ಪಡೆಯಲು ಡಿಸೆಂಬರ್ 14 ಕಡೆಯ ದಿನವಾಗಿದೆ. ಅಗತ್ಯವಿರುವ ಗ್ರಾಮ ಪಂಚಾಯತಿಗಳಿಗೆ ಡಿಸೆಂಬರ್ 22 ರಂದು ಮತದಾನ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಎರಡೆನೇ ಹಂತದಲ್ಲಿ ಡಿಸೆಂಬರ್ 11ರಂದು ಅಧಿಸೂಚನೆ ಹೊರಬೀಳಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಡಿಸೆಂಬರ್ 16 ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದ್ದು, ಡಿಸೆಂಬರ್ 17ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಡಿಸೆಂಬರ್ 19ರಂದು ನಾಮಪತ್ರ ವಾಪಸ್ ಪಡೆಯಲು ಕಡೆಯ ದಿನವಾಗಿದ್ದು, ಡಿಸೆಂಬರ್ 27 ರಂದು ಮತದಾನ ನಡೆಯಲಿದೆ. ಎರಡೂ ಹಂತಗಳಲ್ಲಿ ನಡೆಯುವ ಗ್ರಾಮ ಪಂಚಾಯತಿ ಚುನಾವಣೆ ಮತದಾನದ ಮತ ಎಣಿಕೆಯು ಡಿಸೆಂಬರ್ 30 ರಂದು ಏಕಕಾಲಕ್ಕೆ ನಡೆಯಲಿದೆ. ಡಿಸೆಂಬರ್ 31 ಕ್ಕೆ ಮತದಾನ ಪ್ರಕ್ರಿಯೆ ಮುಗಿಯಲಿದೆ ಎಂದು ಹೇಳಿದರು.

ಕೋವಿಡ್ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಕಾನೂನು ಸುವ್ಯವಸ್ಥೆಯಿಂದ ಚುನಾವಣೆ ನಡೆಯಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಒಟ್ಟು ಕ್ಷೇತ್ರಗಳು :  

ರಾಜ್ಯದ 30 ಜಿಲ್ಲೆಗಳಲ್ಲಿನ ಒಟ್ಟು 6004 ಗ್ರಾಮ ಪಂಚಾಯಿತಿಗಳಲ್ಲಿ 'ಅವಧಿ ಮುಕ್ತಾಯವಾಗದ 162 ಗ್ರಾಮ ಪಂಚಾಯಿತಿಗಳು', 33 ಗ್ರಾಮ ಪಂಚಾಯಿತಿಗಳು ಪೂರ್ಣವಾಗಿ ಹಾಗೂ 41 ಗ್ರಾಮ ಪಂಚಾಯಿತಿಗಳು ಭಾಗಶಃ ನಗರ ಸ್ಥಳೀಯ ಸಂಸ್ಥೆಗೆ ಸೇರ್ಪಡೆಯಾಗಿರುವುದರಿಂದ ಒಟ್ಟು 74 ಗ್ರಾಮ ಪಂಚಾಯಿತಿಗಳು, ಒಟ್ಟಾರೆ 242 ಗ್ರಾಮ ಪಂಚಾಯಿತಿಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ 5762 ಗ್ರಾಮ ಪಂಚಾಯಿತಿಗಳ 35,884 ಕ್ಷೇತ್ರಗಳಿಂದ ಒಟ್ಟು 92,121 ಸ್ಥಾನಗಳಿಗೆ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ ಎಂದು ವಿವರಿಸಿದರು.

ಮೊದಲ ಹಂತದಲ್ಲಿ 113 ತಾಲೂಕುಗಳ 2930 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆದರೆ, ಎರಡನೇ ಹಂತದಲ್ಲಿ 113 ತಾಲೂಕುಗಳ 2832 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಯಲಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ ಎಂದು ತಿಳಿಸಿದರು.

ಮತದಾರರೆಷ್ಟು? :  

ಗ್ರಾಮ ಪಂಚಾಯಿತಿಯ ಚುನಾವಣೆ ಪಕ್ಷ ರಹಿತ ಚುನಾವಣೆಯಾಗಿದೆ. ರಾಜ್ಯದಲ್ಲಿ ಒಟ್ಟು 2,97,15,048 ಗ್ರಾಮ ಪಂಚಾಯಿತಿ ಮತದಾರರು ಇರುತ್ತಾರೆ. ಇದರಲ್ಲಿ ಪುರುಷ ಮತದಾರರು 1,49,71, 676 ಹಾಗೂ 1,47,41,964 ಮಹಿಳಾ ಮತದಾರರಿದ್ದಾರೆ. 1048 ಇತರರು ಇದ್ದಾರೆ ಎಂದು ತಿಳಿಸಿದರು.

45128 ಮತಗಟ್ಟೆಗಳಿಗೆ ಸುಮಾರು 2.70,768 ಮತಗಟ್ಟೆ ಅಧಿಕಾರಿ/ಸಿಬ್ಬಂದಿಯನ್ನು ನೇಮಿಸಲಾಗಿದೆ. ಅಂದಾಜು 5847 ಚುನಾವಣಾಧಿಕಾರಿಗಳನ್ನು ಹಾಗೂ 6085 ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. ಕೋವಿಡ್-19ರ ಹಿನ್ನೆಲೆಯಲ್ಲಿ ಚುನಾವಣೆಗಾಗಿ ಅಂದಾಜು 45,000 ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರ ನೆರವು ಪಡೆದುಕೊಳ್ಳಲಾಗುತ್ತಿದೆ. ಆರೋಗ್ಯ ಇಲಾಖೆಯ ಸಿಬ್ಬಂದಿಯ ಸೇವೆಯನ್ನು ಬಳಸಿಕೊಳ್ಳಲಾಗುತ್ತಿದೆ.  ಬೀದರ್ ಜಿಲ್ಲೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ (ಇ.ವಿ.ಎಂ.) ಮೂಲಕ ಹಾಗೂ ಇತರ ಜಿಲ್ಲೆಗಳಲ್ಲಿ ಮತಪೆಟ್ಟಿಗೆಗಳ ಮೂಲಕ ಚುನಾವಣೆ ನಡೆಸಲಾಗುವುದು ಎಂದರು.

ಪ್ರತಿ ಜಿಲ್ಲೆಯಲ್ಲಿ ತಾಲೂಕುವಾರು 2 ಹಂತಗಳಲ್ಲಿ ಚುನಾವಣೆಯನ್ನು ನಡೆಸಲಾಗುತ್ತಿದೆ. ಪ್ರತಿ ಮತಗಟ್ಟೆಯಲ್ಲಿ ಮತದಾರರ ಸಂಖ್ಯೆಯನ್ನು ಗರಿಷ್ಠ 1000ಕ್ಕೆ ಮಿತಿಗೊಳಿಸಲಾಗಿದೆ. ಮತದಾರರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮತಗಟ್ಟೆ ಪ್ರವೇಶಿಸುವ ಮೊದಲು ತಮ್ಮ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಂಡು ಮತ ಚಲಾಯಿಸಬೇಕು. ಕೋವಿಡ್ ಸೋಂಕಿತರು ಹಾಗೂ ಕೋವಿಡ್ ಶಂಕಿತರಿಗೆ ಅಗತ್ಯ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ, ಸಂಬಂಧಪಟ್ಟ ಮತಗಟ್ಟೆಗಳಲ್ಲಿ ಮತದಾನದ ಕೊನೆಯ ಒಂದು ಗಂಟೆಯ ಅವಧಿಯಲ್ಲಿ ಅವಕಾಶ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ನೀತಿ ಸಂಹಿತೆಯು ಪಟ್ಟಣ ಪಂಚಾಯಿತಿ, ಪುರ ಸಭೆ, ನಗರ ಸಭೆ, ನಗರ ಪಾಲಿಕೆ, ಮಹಾನಗರ ಪಾಲಿಕೆ ಪ್ರದೇಶಗಳಿಗೆ ಅನ್ವಯವಾಗುವುದಿಲ್ಲ. ಮತದಾರರು ಯಾವುದೇ ಆತಂಕವಿಲ್ಲದೆ ತಮ್ಮ ಮತದಾನ ಮಾಡಬಹುದು ಎಂದು ಹೇಳಿದರು.

Last Updated : Nov 30, 2020, 6:58 PM IST

For All Latest Updates

ABOUT THE AUTHOR

...view details