ಬೆಂಗಳೂರು:ವಿಧಾನ ಸಭೆಯಿಂದ ಅಂಗೀಕೃತವಾದ ರೂಪದಲ್ಲಿರುವ 3,320.40 ಕೋಟಿ ರೂ.ಗಳ ಕರ್ನಾಟಕ ಧನವಿನಿಯೋಗ (ಸಂಖ್ಯೆ 4)ವಿಧೇಯಕ 2020ಕ್ಕೆ ವಿಧಾನ ಪರಿಷತ್ ಅಂಗೀಕಾರ ನೀಡಿತು.
4ನೇ ದಿನದ ವಿಧಾನ ಪರಿಷತ್ ಕಲಾಪ ಆರಂಭಗೊಳ್ಳುತ್ತಿದ್ದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪರವಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಧನವಿನಿಯೋಗ ವಿಧೇಯಕ ಮಂಡಿಸಿದರು. ನಂತರ ವಿಧೇಯಕ ಕುರಿತು ಮಾತನಾಡಿದ ಗೃಹ ಸಚಿವರು, 3,220 ಕೋಟಿ ರೂ. ಮೊತ್ತದ ಧನವಿನಿಯೋಗದಲ್ಲಿ 110 ಕೋಟಿ ರೂ. ರೆವೆನ್ಯೂ ಕ್ಯಾಪಿಟಲ್, 2210 ಎಕ್ಸ್ಪೆಂಡಿಚರ್ ಕ್ಯಾಪಿಟಲ್ಗೆ ವಿನಿಯೋಗ ಆಗಲಿದೆ. ಧನವಿನಿಯೋಗದ ಮೂರನೇ ಎರಡು ಭಾಗ ಎಕ್ಸ್ಪೆಂಡಿಚರ್ ಕ್ಯಾಪಿಟಲ್ಗೆ ಬಳಕೆಯಾಗಲಿದೆ ಎಂದರು.
ಸಾಲ ಮಾಡಿ ಸರ್ಕಾರ ನಡೆಸುವ ಸ್ಥಿತಿ ಎದುರಾಗಿದೆ, ಇದು ಕೇವಲ ನಮ್ಮ ರಾಜ್ಯಕ್ಕೆ ಮಾತ್ರವಲ್ಲ ಎಲ್ಲಾ ರಾಜ್ಯಗಳೂ ಸಾಲ ಮಾಡಬೇಕಾದ ಸ್ಥಿತಿಯಲ್ಲಿಯೇ ಇವೆ. ಕೇಂದ್ರದಿಂದ ಜಿಎಸ್ಟಿ ಪಾಲು ಬಂದಿಲ್ಲ, 3 ಸಾವಿರ ಕೋಟಿ ರೂ. ಕೊರತೆ ಎದುರಾಗಿದೆ ಎಂದು ವಿವರಣೆ ನೀಡಿದರು.
ವಿಧೇಯಕದ ಮೇಲೆ ಮಾತನಾಡಿದ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಸರ್ಕಾರದಲ್ಲಿ ಹಣ ಇಲ್ಲ, ನಿಗಮ ಮಂಡಳಿ ನೇಮಕ ಮಾಡಿದ್ದೀರಿ, ಮುಂಬರುವ ದಿನಗಳಲ್ಲಿ ಸರ್ಕಾರಿ ನೌಕರರಿಗೆ ಸಂಬಳ ಕೊಡೋಕೂ ಆಗಲ್ಲ, ನೋಟ್ ಬ್ಯಾನ್, ಜಿಎಸ್ಟಿ, ಪ್ರವಾಹಗಳ ಜೊತೆಗೆ ಕೇಂದ್ರ ಸರ್ಕಾರದ ಅನುದಾನ ಕೂಡ ರಾಜ್ಯಕ್ಕೆ ಸರಿಯಾಗಿ ಬಿಡುಗಡೆ ಆಗಿಲ್ಲ. ಅಬಕಾರಿ ತೆರಿಗೆ ಹೊರತು ಪಡಿಸಿ, ವಾಣಿಜ್ಯ, ಮೋಟಾರು ವಾಹನ, ಮುದ್ರಾಂಕ ತೆರೆಗೆಗಳೂ ಕಡಿಮೆ ಆಗಿವೆ. ರಾಜಸ್ವ ಸ್ವೀಕೃತಿ ಪ್ರಮಾಣ ಕೂಡ ಕಡಿಮೆ ಆಗಿದೆ. 18,847 ಕೋಟಿ ರೂ. ಜಿಎಸ್ಟಿ ಹಣ ಬಾಕಿಯಿದೆ. ಈವರೆಗೂ ಬಿಡುಗಡೆ ಆಗಿಲ್ಲ ಎಂದು ಟೀಕಿಸಿದರು.